ಕಲಿಯಬೇಕಾದದ್ದು ಬೇಕಾದಷ್ಟ್ಟಿದ್ದೆ….

ಲೇಖಕರು :ದಿನೇಶ್ ಹೊಳ್ಳ.

ಕಾಲದ ಜಾಲಕ್ಕೆ ಸಿಕ್ಕಿ ಹಾಕಿಕೊಂಡು ಕಾವಲು ಇಲ್ಲದ ಕಾಯಗಳಿಗೆ ಸಾವಿನ ತೋರಣ ಕಟ್ಟಿದ ದುರಂತಗಳಿಗೆ ಯಾರು ಹೊಣೆ ? ಉತ್ತರ ಇಲ್ಲದ ಪ್ರಶ್ನೆ ಇದು. ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ, ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ . ಕಣ್ಣಿಗೆ ಕಾಣದ ವೈರಸ್ ಒಂದಕ್ಕೆ ವಿಶ್ವವೇ ಅಡ್ಡಡ್ಡ ಮಲಗಿದೆ ಎಂದರೆ ಇಲ್ಲಿ ಉತ್ತರಕ್ಕಿಂತ ತತ್ತರವೆ ದೀರ್ಘವಾಗಿ ಎತ್ತರದ ಕೈಗೆಟುಕದ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ದಿಂದ ಏನನ್ನೂ ಸಾಧಿಸಬಹುದು, ಪ್ರಕೃತಿಯ ವಿರುದ್ಧವಾಗಿ ಯೆಂತೆಂತಾ ಅಭಿವೃದ್ದಿಯನ್ನು ಕೂಡಾ ಮಾಡಬಹುದು ಎಂಬ ಮಾನವ ಅಹಂಕಾರಕ್ಕೆ ಇಂದು ಪ್ರಕೃತಿಯೇ ಉತ್ತರ ನೀಡಿದೆ ಜೊತೆಗೆ ಪ್ರತೀಕಾರವಾಗಿ ಸೇಡು ಕೂಡ ತೀರಿಸಿಕೊಂಡು ತನ್ನ ಶಕ್ತಿಯನ್ನು ತೋರಿಸಿದೆ. ವಿಜ್ಞಾನ, ತಂತ್ರಜ್ಞಾನ ಎಂಬ ಆಧುನಿಕ ಅಸ್ಥ್ರದಿಂದ ಕೊ ರೋನ ವನ್ನ ಅಳಿಸಬಹುದಿತ್ತಲ್ಲಾ..? ಯಾಕೆ ಹೇಡಿಗಳಂತೆ ಮುಖ ಮುಚ್ಚಿ ಮನೆಯಲ್ಲಿ ಅಡಗಿ ಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಯಿತು ? ಇದು ಇಂದು ಜಗತ್ತನ್ನೆ ಕಾಡುವ ಪ್ರಧಾನ ಪ್ರಶ್ನೆ.


ಕೊರೋಣ ಎಂಬ ಸಾಂಕ್ರಾಮಿಕ ವೈರಸ್ ಎಲ್ಲಿ ಹುಟ್ಟಿತು, ಹೇಗೆ ಹುಟ್ಟಿತು ಎಂಬುದನ್ನು ಬಿಟ್ಟು ಬಿಡೋಣ. ಆದರೆ ಕಳೆದ 2 ದಶಕಗಳಿಂದ ನಾವು ಅಭಿವೃದ್ದಿ ಎಂಬ ನೆಪದಲ್ಲಿ ಆಧುನಿಕ ಸಿರಿತನದ ಸೋಗಿನಲ್ಲಿ ನಮ್ಮೆಲ್ಲರ ಬದುಕಿನ ಚೇತನಾ ಶಕ್ತಿ ಆಗಿರುವ ನಿಸರ್ಗದ ಮೇಲೆ ಗೀರು ಗಾಯಗಳನ್ನು ಮಾಡುತ್ತಲೇ ಹಂತ ಹಂತವಾಗಿ ಎಷ್ಟು ಮಾರಣಾಂತಿಕ ಹೊಡೆತ ನೀಡುತ್ತಾ ಬಂದಿದ್ದೇವೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ ಇಂದು ಹರಡುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ಮತ್ತು ನಿರಂತರ ಆಗುತ್ತಿರುವ ಪ್ರಾಕೃತಿಕ ದುರಂತಗಳಿಗೆ ಉತ್ತರಗಳನ್ನು ಕಂಡು ಕೊಳ್ಳಬಹುದು.
ನಿಸರ್ಗದ ಎದುರು ಮನುಕುಲ ಏನೂ ಅಲ್ಲ ಎಂಬು ದನ್ನು ಅರಿಯದ ಅಥವಾ ಅರಿತರೂ ನಿರ್ಲಕ್ಷ ಮಾಡಿಕೊಂಡ ಮಾನವ ಇಂದು ತನ್ನ ಕೈಯಲ್ಲಿ ಇರುವ ಕೊಡಲಿಯಿಂದ ತಾನೇ ಏಟು ಹೊಡೆಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿ ಆಗಿದೆ. ದಿನ ನಿತ್ಯ ಸಾವು, ನೋವುಗಳ ಆರ್ಭಟವೆ ಆಗುತ್ತಿದ್ದರೂ ತನ್ನಿಂದ ಏನು ತಪ್ಪಾಗಿದೆ ಏನು ಮಾಡಬೇಕಿತ್ತು ಎಂದು ಇನ್ನಾದರೂ ಕಲಿತು ಜಾಗೃತ ರಾಗದೆ ಇದ್ದರೆ ಇನ್ನೂ ಮುಂದೆ ಆಗಲಿರುವ ಇನ್ನಷ್ಟು ದೊಡ್ಡ ಪ್ರಾಕೃತಿಕ ದುರಂತಗಳಿಗೆ ನಾವೇ ಆಮಂತ್ರಣ ನೀಡಿ ಆಹ್ವಾನಿಸಿದಂತೆ ಆಗಬಹುದು.
ಇಂದು ಮನುಜ ಸಂತಾನ ಇರುವ ಇಡೀ ವಿಶ್ವಕ್ಕೇ ಲಾಕ್ ಡೌನ್ ಎಂಬ ಕಾರಣದಿಂದ ಬೀಗ ಜಡಿಯಲಾಗಿದೆ. ದೇಶ, ದೇಶಗಳ ಇಕಾನಮಿ ತತ್ತರಿಸಿ ಹೋಗಿದೆ, ಎಲ್ಲೆಲ್ಲೊ ಸಾವು, ನೋವುಗಳದೆ ಅಟ್ಟಹಾಸ. ಒಂದು ಸಣ್ಣ ವೈರಸ್ ಗೆ ದೇಶವೇ ಸ್ತಬ್ಧ, ನಿಶ್ಯಬ್ದ…!
ಈ ಲಾಕ್ ಡೌನ್ ಎಂಬ ಹೊಸ ಸಿಲೆಬಸ್ ಒಳ್ಳೆಯ ಒಂದು ಪಾಠ ಕಲಿಸಿದೆ. ಸಿರಿತನ ಒಂದೇ ಬದುಕಿನ ಪರಮ ಶ್ರೇಷ್ಠ ಗುರಿ ಎಂದು ಬೀಗಿದವರ ಬದುಕಿಗೆ ಪರಮ ನೆಂಟು ಬೀಗ ಹಾಕಿ ಬಿಟ್ಟಿದೆ. ಜೀವ ಮತ್ತು ಬದುಕು ಇವೆರಡರ ಅಗತ್ಯ ಮತ್ತು ಮಹತ್ವವನ್ನು ಈ ಲಾಕ್ ಡೌನ್ ತೋರಿಸಿ ಕೊಟ್ಟಿದೆ. ಬದುಕಿನ ಬಗ್ಗೆ ಸ್ವ ಅಧ್ಯಯನ ಮಾಡಲು ಇದು ಸಕಾಲ. ಎಷ್ಟೂ ಮಕ್ಕಳು ಅನಾಥರಾಗಿ ಬಿಟ್ಟರು, ಎಷ್ಟೋ ಮಹಿಳೆಯರು ವಿಧವೆಯ ರಾಗಿ ಬಿಟ್ಟರು. ಬದುಕಿನ ಎಲ್ಲವನ್ನೂ ಕಳೆದುಕೊಂಡ ಮೇಲೆ ಕೊನೆಯದಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ ಮುಂದಿನ ಭವಿಷ್ಯ ಯಾರಿಗಾಗಿ,, ಯಾಕಾಗಿ… ಮತ್ತು ಎದುರಿಸುವ ರೀತಿ, ಭೀತಿ ಹೇಗೆ ಎಂಬುದು. ಇಲ್ಲಿ ಈ ಸಂದರ್ಭದಲ್ಲಿ ಮಾಲ್, ಮಹಲು ಗಳ ಮೇಲೆ ಇದ್ದವರಿಗೆ ಏನೂ ಸಮಸ್ಯೆ ಆಗದೆ ಇದ್ದರೂ ಮದ್ಯಮ ವರ್ಗ ಮತ್ತು ಬಡ ಜನರ ಬದುಕನ್ನೇ ಛಿದ್ರ ಗೊಳಿಸಿ ಬಿಟ್ಟಿದೆ, ಒಂದು ಹೊತ್ತಿನ ಊಟಕ್ಕೂ ತತ್ತರಿಸಿ ಬಿಕ್ಕಳಿಸುವಂತಾಗಿದೆ ಎಂಬುದಂತೂ ಕಟು ಸತ್ಯ.

ಲಾಕ್ ಡೌನ್ ಆಗಿ ಎಲ್ಲರೂ ಮನೆಯಲ್ಲಿ ಸ್ತಬ್ದರಾಗಿ ಇರುವಾಗ ಕಲಿಯಬೇಕಾದದ್ದು ಮುಂದಿ ನ ಭವಿಷ್ಯದ ಭದ್ರತೆಯನ್ನು. ಇನ್ನಾದರೂ ಯೆಚ್ಚರವಾಗೋಣ, ಕಲಿಯೋಣ. ಆದ ತಪ್ಪನ್ನು ಮರೆತು ಹೊಸ ಪಾಠ ಕಲಿಯಲು ಇದು ಒಳ್ಳೆಯ ಸಂದರ್ಭ. ಪ್ರಕೃತಿಯಿಂದ ನಾವೆಷ್ಟು ಉಪಯೋಗ ಪಡೆದು ಕೊಂಡಿದ್ದೇವೆ ? ಪ್ರಕೃತಿ ಕೋಪಕ್ಕೆ ಕಾರಣರಾದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದರ ಬಗ್ಗೆ ಮನೆ, ಮನೆಗಳ ಮನ, ಮನಗಳಲ್ಲಿ ಅರಿತುಕೊಂಡು ಕ್ರಿಯಾಶೀಲರಾಗಿ ನಮ್ಮೆಲ್ಲರ ಸ್ವರ, ಕರ ಸದಾ ನಿಸರ್ಗದ ಪರ ಎಂಬ ದ್ಯೆಯ ಉದ್ದೇಶ ಇಟ್ಟುಕೊಂಡೇ ಇದ್ದರೆ ಮುಂದೆ ಆಗಲಿರುವ ಆಪತ್ತನ್ನು ಎದುರಿಸಬಹುದು. ಅದು ಬಿಟ್ಟು ಮನೆಯಲ್ಲಿ ತಿಂದು ಕೊಂಡು, ಬಿದ್ದುಕೊಂಡು ಏನನ್ನೂ ಕಲಿಯದೇ ‘ ಲಾಕ್ ಡೌನ್ ಮುಗಿಯುವುದು ಯಾವಾಗ ?’ ಎಂದು ಸದಾ ಪಿಟೀಲು ಕೊಯ್ಯುತ್ತಾ ಇದ್ದರೆ ಅರಿವು ಶೂನ್ಯ ಅಷ್ಟೇ.
ಆರಂಭ ಆದ ಯುದ್ಧ ಮುಗಿಯಲೆ ಬೇಕು. ಎಲ್ಲದಕ್ಕೂ ಒಂದು ಕೊನೆ ಇದೆ. ಆದ ತಪ್ಪನ್ನು ಮರೆತು ಹೊಸ ಬದುಕಿನ ಬಗ್ಗೆ ಆಶಾದಾಯಕ ಗುರಿಯನ್ನು ಹೊತ್ತು ಕೊಂಡಿರುವಾಗ ಒಮ್ಮೆ ನಮ್ಮ ಪ್ರಕೃತಿ ತಾಯಿಯ ಬಗ್ಗೆ ಚಿಂತಿಸೋಣ. ಮನೆಯಲ್ಲಿ ತಾಯಿ ಅಳುತ್ತಾ ಇದ್ದರೆ ಆ ಮನೆ ಬಿಡಿ ಸಂಸಾರವೇ ನೆಮ್ಮದಿಯಿಂದ ಇರುವುದಿಲ್ಲ. ಅದೇ ರೀತಿ ನಮ್ಮೆಲ್ಲರ ಹೆಮ್ಮೆಯ ಪ್ರೀತಿಯ ಪ್ರಕೃತಿ ಮಾತೆ ಕಣ್ಣೀರು ಹಾಕದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ದಾಗಿರಲಿ. ಹೊಸ ಬದುಕಿನ ಪಥದಲ್ಲಿ ನವ ಚೈತನ್ಯದ ರಥದಲ್ಲಿ ಸಾಗೋಣ.

ಲೇಖಕರು : ದಿನೇಶ್ ಹೊಳ್ಳ.

Leave a Reply

Your email address will not be published. Required fields are marked *

error: Content is protected !!