ಯೋಧರಿಗೆ 100 ದಿನದ ರಜೆ : ಕೇಂದ್ರ ಗೃಹ ಇಲಾಖೆ ಹೊಸ ಚಿಂತನೆ
ನವದೆಹಲಿ, ಮಾ.28 : ಕೇಂದ್ರೀಯ ಸಶಸ್ತ್ರ ಸೇನಾ ಪಡೆಗಳ (ಸಿಎಪಿಎಫ್) ಯೋಧರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ರಜೆ ನೀಡುವ ಕುರಿತು ಕೇಂದ್ರ ಗೃಹ ಇಲಾಖೆ ಹೊಸ ಚಿಂತನೆ ನಡೆಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪರಿಕಲ್ಪನೆಯ ಅಡಿಯಲ್ಲಿ ಈ ನೂತನ ಚಿಂತನೆ ಕೈಗೊಳ್ಳಲಾಗಿದ್ದು, ಸಿಎಪಿಎಫ್ ಯೋಧರು ತಮ್ಮ ಕುಟುಂಬದೊಂದಿಗೆ ಕನಿಷ್ಠ 100 ದಿನಗಳನ್ನು ಕಳೆಯಲು ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸುವ ಸಾಧ್ಯತೆಯಿದೆ. ಮಾತ್ರವಲ್ಲದೆ ಸಮಗ್ರ ನೀತಿಯ ಬಾಹ್ಯರೇಖೆಗಳನ್ನು ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಪ್ರಸ್ತಾವನೆ ಸಿದ್ಧಪಡಿಸುವ ಸಲುವಾಗಿ ಈಗಾಗಲೇ ಹಲವಾರು ಸುತ್ತಿನ ಸಭೆಗಳು ನಡೆದಿದ್ದು. ಈ ಸೌಲಭ್ಯ ಜಾರಿಗೊಳಿಸಲು ಇರುವ ಆಡಳಿತಾತ್ಮಕ ಅಡಚಣೆಗಳನ್ನು ನಿರ್ಮೂಲನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸಿಎಪಿಎಫ್ ನ ನಾನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ಯೋಧರ ಮೇಲಿರುವ ದೈನಂದಿನ ಕರ್ತವ್ಯದ ಒತ್ತಡವನ್ನು ಇಳಿಸಿ, ಅವರ ಸಂತೋಷದ ಸಮಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಇನ್ನು ಈ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ, ಸಶಸ್ತ್ರ ಸೇನಾ ಪಡೆಗಳ ಅಧೀನದಲ್ಲಿ ಬರುವ ಎಲ್ಲಾ ಪಡೆಗಳಿಗೂ ಈ ಯೋಜನೆ ಅನ್ವಯಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಿರುವ ನಿಯಮಗಳಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಕಲ್ಯಾಣ ಕ್ರಮವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಗೃಹ ಸಚಿವಾಲಯವು ಮುಂದಿನ ತಿಂಗಳೊಳಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಒಂದು ವರ್ಷದಲ್ಲಿ ತಮ್ಮ ಪಡೆಗಳಿಗೆ 60-65 ದಿನಗಳ ರಜೆಯನ್ನು ನೀಡಲು ಪಡೆ ಸಮರ್ಥವಾಗಿದೆ, ಆದರೆ ಸಾಮಾನ್ಯ ರಜೆ ಅಂಶವನ್ನು 15 ದಿನಗಳಿಂದ 28-30 ದಿನಗಳವರೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ತರಲು ಸಾಧ್ಯವಾದರೆ, ಸೈನಿಕರಿಗೆ 100 ದಿನಗಳ ರಜೆ ನೀಡಬಹುದುಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.