ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಾ.28 -29 ರಂದು ಬೃಹತ್ ಪ್ರತಿಭಟನೆಗೆ ಕಾರ್ಮಿಕ ಸಂಘಟನೆ ಕರೆ
ಉಡುಪಿ ಮಾ.26 (ಉಡುಪಿ ಟೈಮ್ಸ್ ವರದಿ): ಇಂಧನ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ಬಹುತೇಕ ಸರ್ಕಾರಿ ಇಲಾಖೆಗಳು ಮತ್ತು ಆಡಳಿತದಲ್ಲಿ ಬಾರಿ ಪ್ರಮಾಣದ ಖಾಸಗೀಕರಣ ಮತ್ತು ಕೆಲಸದ ಹೊರಗುತ್ತಿಗೆಯ ಮೂಲಕ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಯೋಚಿಸುತ್ತಿರುವುದು ಕೈಬಿಡಬೇಕು ಎಂದು ಆಗ್ರಹಿಸಿ ದುಡಿಯುವ ವರ್ಗ ಪ್ರಮುಖ ಬೇಡಿಕೆಗಳಿಗಾಗಿ ಎರಡು ದಿನಗಳ ಮುಷ್ಕರ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತ್ ಪಿಡಿಓ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಸಿಐಟಿಯುನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ ಶಿಕ್ಷಣ, ಮತ್ತಿತ್ತರ ಕ್ಷೇತ್ರಗಳಿಗೆ ನಿರಂತರ ಬಜೆಟ್‌ನಲ್ಲಿ ಹಣಕಾಸಿನ ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ನಿರಂತರ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ ಕೇಂದ್ರ ಸರ್ಕಾರದ ಜನವಿರೋಧಿ ತೆರಿಗೆ ನೀತಿ ದಿನ ಬಳಕೆಯ ಸರಕು ಮತ್ತು ಸೇವೆಗಳ ಮೇಲಿನ ಬಾರಿ ಪ್ರಮಾಣದ ಪರೋಕ್ಷ ಜಿ.ಎಸ್.ಟಿ.ಯಂತಹ ಕ್ರಮಗಳಿಂದಾಗಿ ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳಗೊಳ್ಳುತ್ತಲೇ ಇವೆ. ಇದು ಭಾರತವನ್ನು ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಇಳಿಸಿದೆ ಎಂದರು.
ಹಾಗೂ ಬಡಜನರ ಆರ್ಥಿಕ ಪುನಶ್ಚೇತನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ತೆರಿಗೆ ಕಡಿಮೆ ಮಾಡಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ರೂ.10,000/- ನೇರ ನಗದು ವರ್ಗಾವಣೆ ಆಗಬೇಕು. ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ ಆಹಾರ ಧಾನ್ಯಗಳನ್ನು ನೀಡಬೇಕೆಂಬ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ದೇಶದ ಸಂಪತ್ತಾಗಿರುವ ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ ವಿಮಾನಯಾನ, ವಿದ್ಯುತ್, ಕಲ್ಲಿದ್ದಲು, ಬ್ಯಾಂಕ್, ವಿಮಾ ಕ್ಷೇತ್ರ, ದೂರಸಂಪರ್ಕ, ಮೂಲಸೌಕರ್ಯ, ಹೆದ್ದಾರಿಗಳು, ರಕ್ಷಣಾ ಸಾಮಾಗ್ರಿ ಉತ್ಪಾದನಾ ಕೈಗಾರಿಕೆ ಹಾಗೂ ಮತ್ತಿತ್ತರ ಸಾರ್ವಜನಿಕ ಉದ್ದಿಮೆಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಸಂಪತ್ತು. ನಗದೀಕರಣ ಯೋಜನೆಯನ್ನು ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಬಹುತೇಕ ಸರ್ಕಾರಿ ಇಲಾಖೆಗಳು ಮತ್ತು ಆಡಳಿತದಲ್ಲಿ ಬಾರಿ ಪ್ರಮಾಣದ ಗುತ್ತಿಗೀಕರಣ ಮತ್ತು ಕೆಲಸದ ಹೊರಗುತ್ತಿಗೆಯ ಮೂಲಕ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಯೋಚಿಸುತ್ತಿರುವುದು ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು.
ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಬದಲಾಗಿ ಅಲ್ಪಸ್ವಲ್ಪ ಇರುವ ಕಾನೂನು ಗಳನ್ನು ಬದಲಾಯಿಸಿ ಅವರ ಕಲ್ಯಾಣಕ್ಕೆ ಇರುವ ಮಂಡಳಿಗಳನ್ನು ದುರ್ಬಲಗೊಳಿಸಿ ಇರುವ ಸೌಲಭ್ಯ ಗಳನ್ನು ಮೊಟಕುಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಕಾರ್ಮಿಕ ಸಂಘಗಳ ಜಂಟಿ ಸಮಿತಿ ವತಿಯಿಂದ ಕೇಂದ್ರ ಸರಕಾರಕ್ಕೆ ಸಲ್ಲಿಸಲಿರುವ ಮನವಿಯಲ್ಲಿ ಒಳಗೊಂಡ ಬೇಡಿಕೆಗಳು ಹೀಗಿವೆ.
- ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರಿಯ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಬೇಕು.
2, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ ರೂ. 10,000/- ನೇರ ನಗದು ವರ್ಗಾವಣೆಮಾಡಬೇಕು ಹಾಗೂ ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ ಆಹಾರಧಾನ್ಯಗಳನ್ನು ನೀಡಬೇಕು. - ಕಾರ್ಪೊರೇಟ್ ಬಂಡವಾಳ ಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕು- ಎಲ್ಲಾ ಕಾರ್ಮಿಕರಿಗೆ ಕನಿಷ್ಟ ಕೂಲಿ ಮಾಸಿಕ ರೂ.12,000/- ನಿಗದಿ ಮಾಡಬೇಕು, ಸರಕಾರಿ ಆಧಾರಿತ ಗ್ಯಾರಂಟಿ ಪಿಂಚಣಿ ಜಾರಿ ಮಾಡಬೇಕು.
- ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ (ತಿದ್ದುಪಡಿ) ಮಸೂದೆಯನ್ನು ವಾಪಸ್ಸು ಪಡೆಯಬೇಕು.ಶಾಸನಬದ್ಧ ಬೆಂಬಲ ಬೆಲೆ ಕಾಯ್ದೆ ರೂಪಿಸಬೇಕು. ರಾಜ್ಯ ಸರ್ಕಾರ ಸಹ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಪಾಪಾಸು ಪಡೆಯಬೇಕು.
- ದೇಶದ ಸಂಪತ್ತಾದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು.
6.ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಭದ್ರತೆ ಒದಗಿಸಬೇಕು. ಕೋವಿಡ್, ಲಾಕ್‌ಡೌನ್ ಸಂಕಷ್ಟಕ್ಕೆ ಒಳಗಾದ ಅಸಂಘಟಿತರಿಗೆ ಪರಿಹಾರ ಒದಗಿಸಬೇಕು. - ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೆಲಸದ ದಿನಗಳನ್ನು 200ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ನೀಡಬೇಕು.
- ಕೋವಿಡ್’ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯ ಒದಗಿಸಬೇಕು.
- ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಮ್ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕು. ಐಸಿಡಿಎಸ್, ಸಂರಕ್ಷಿಸಬೇಕು.
- ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರೆ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.
- ಸಂಘ ಮಾನ್ಯತೆ, ಗುತ್ತಿಗೆ ಮುಂತಾದ ಖಾಯಂಯೇತರರ ಖಾಯಂಗೆ, ಖಾಸಗಿ ಬಸ್ಸು ಮತ್ತಿತರ ಚಾಲಕರಿಗೆ ಬೀದಿ ಬದಿವ್ಯಾಪಾರಸ್ಥರಿಗೆ, ಹೋಟೆಲ್, ಗ್ಯಾರೇಜ್, ಟೈಲರ್, ಕ್ಷೌರಿಕರು, ಡೋಬಿ, ಮನೆಗೆಲಸ, ಪೆಟ್ರೋಲ್, ಗ್ಯಾಸ್ ಬಂಕ್‌ಗಳಲ್ಲಿಕೆಲಸ ಮಾಡುವ ಕಾರ್ಮಿಕರಿಗೆ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಸ್ಕಾಲರ್‌ಶಿಫ್, ಪಿಂಚನಿ ಮತ್ತಿತರ ಸೌಲಭ್ಯ ನೀಡಬೇಕು ಹಾಗೂ ಅಸಂಘಟಿತರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು.
- ಆಟೋ ರಿಕ್ಷಾ, ವಾಹನ ಚಾಲಕರಿಗೆ ಮೀನುಗಾರರು ಮತ್ತು ಮೀನು ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ ಸೌಲಭ್ಯನೀಡಬೇಕು.
- ಹಂಚು ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು.
- ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಿ ಕಾರ್ಮಿಕರ ಭವಿಷ್ಯ ನಿಧಿ ಸಮಸ್ಯೆ ಬಗೆಹರಿಸಬೇಕು.
- ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ 1996 ಸೆಸ್ ಕಾನೂನು ರದ್ಧತಿ ಕೈಬಿಡಬಿಡಬೇಕು, ಇಎಸ್‌ಐ, ಪಿಎಫ್ ಜಾರಿ ಮಾಡಬೇಕು.
- ನಿವೇಶನ ರಹಿತರಿಗೆ ನಿವೇಶನ ನೀಡಬೇಕು. 94ಸಿ, 94ಸಿಸಿ, ಸಕ್ರಮಗೊಳಿಸಬೇಕು