ನ್ಯಾಯಾಧೀಶ ಹತ್ಯೆ ಪ್ರಕರಣ ವಾಟ್ಸ್ ಆ್ಯಪ್’ನ ಮುಖ್ಯಸ್ಥರನ್ನು ಆರೋಪಿಯನ್ನಾಗಿಸಿ- ಹೈಕೋರ್ಟ್
ಹೊಸದಿಲ್ಲಿ ಮಾ.26 : 2021 ರ ಜುಲೈ 28 ರಲ್ಲಿ ನಡೆದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ನ ಮುಖ್ಯಸ್ಥರನ್ನು ಆರೋಪಿಯನ್ನಾಗಿ ಮಾಡುವಂತೆ ಜಾರ್ಖಂಡ್ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.
ನ್ಯಾಯಾಧೀಶರ ನಿಧನದ ನಂತರ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಆರಂಭಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಾ.ರವಿ ರಂಜನ್ ಹಾಗೂ ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ವ್ಯಾಟ್ಸ್ ಆ್ಯಪ್ ಮುಖ್ಯಸ್ಥರನ್ನು ಆರೋಪಿಯನ್ನಾಗಿ ಮಾಡುವಂತೆ ಸಿಬಿಐಯನ್ನು ಕೇಳಿದೆ ಹಾಗೂ ಫೇಸ್‌ಬುಕ್ ಮಾಲಿಕತ್ವದ ಕಂಪನಿಗೂ ನೋಟಿಸ್ ನೀಡಿದೆ.
2021 ಜುಲೈ 28 ರಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್(49) ಅವರು ಜಾಗಿಂಗ್ ಮಾಡಲು ಹೊರಟಿದ್ದಾಗ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಬಂಧಿಸಲಾದ ಇಬ್ಬರು ಆರೋಪಿಗಳ ವ್ಯಾಟ್ಸ್ ಆ್ಯಪ್ ಚಾಟ್ ವಿವರಗಳನ್ನು ವ್ಯಾಟ್ಸ್ ಆ್ಯಪ್ ಕಂಪೆನಿಯಿಂದ ಕೋರಲಾಗಿತ್ತು. ಆದರೆ ವ್ಯಾಟ್ಸ್ ಆ್ಯಪ್ ಪ್ರಮುಖರು ಭದ್ರತೆ ಹಾಗೂ ಗೌಪ್ಯತೆ ನೀತಿಗಳನ್ನು ಉಲ್ಲೇಖಿಸಿ ವಿವರ ನೀಡಲು ನಿರಾಕರಿಸಿದರು ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.