ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಲಾಂ ಮಂಗಳಾರತಿ ನಿಲ್ಲಿಸಬೇಕು ವಿ ಎಚ್ ಪಿ ಆಗ್ರಹ
ಉಡುಪಿ(ಉಡುಪಿ ಟೈಮ್ಸ್ ವರದಿ) : ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತೀದಿನ ರಾತ್ರಿ 8 ಗಂಟೆಗೆ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಯುವ ಸಲಾಂ ಎಂಬ ಮಹಾಮಂಗಳಾರತಿ ನಿಲ್ಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರ. ಭಾರತದ 108 ಶಕ್ತಿ ಪೀಠಗಳಲ್ಲಿ ಕೊಲ್ಲೂರು ಕೂಡಾ ಒಂದು. ಇಂತಹ ಕ್ಷೇತ್ರದಲ್ಲಿ ಕ್ರೂರಿ, ಮತಾಂಧ, ಹಿಂದೂ ವಿರೋಧಿ, ನೂರಾರು ದೇವಸ್ಥಾನಗಳನ್ನು ಧ್ವಂಸ ಮಾಡಿದ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಮೂಕಾಂಬಿಕೆಗೆ ಮಹಾ ಮಂಗಳಾರತಿಯಾಗುವುದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತದ್ದು. ಇದು ಗುಲಾಮಗಿರಿಯ ಸಂಕೇತವಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಮಾಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿದೆ.
ಈ ಗುಲಾಮಗಿರಿಯ ಸಂಕೇತವನ್ನು ರದ್ದು ಮಾಡಬೇಕು, ಸಲಾಂ ಹೆಸರನ್ನು ತೆಗೆದು ಕೇವಲ ದೇವರ ಹೆಸರಿನಲ್ಲಿ ಮಹಾಮಂಗಳಾರತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ವಿಶ್ವ ಹಿಂದೂ ಪರಿಷತ್ ನ ಮುಖಂಡರು ಆಗ್ರಹಿಸಿದ್ದಾರೆ.