ಶಾಸಕ ರಘುಪತಿ ಭಟ್ ದ್ವೇಷ ರಾಜಕೀಯದಿಂದ ಮಸೀದಿಯ ಜಾಗದಲ್ಲಿದ್ದ ಕಟ್ಟಡ ನೆಲಸಮ: ಎಸ್ ಡಿ ಪಿ ಐ ಆರೋಪ
ಉಡುಪಿ (ಉಡುಪಿ ಟೈಮ್ಸ್ ವರದಿ): ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ಉಡುಪಿ ಶಾಸಕ ರಘುಪತಿ ಭಟ್ ರವರ ಕುಮ್ಮಕ್ಕಿನಿಂದ ಉಡುಪಿ ನಗರಸಭೆ ಜಾಮಿಯಾ ಮಸೀದಿಗೆ ಒಳಪಟ್ಟ ಕಟ್ಟಡದಲ್ಲಿದ್ದ ಹೋಟೆಲ್ ಗಳನ್ನೂ ನೆಲಸಮ ಗೊಳಿಸಿದೆ ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಆರೋಪಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ಜಾಮಿಯಾ ಮಸೀದಿಗೆ ಒಳಪಟ್ಟ ಕಟ್ಟಡದಲ್ಲಿದ್ದ ಝಾರ ಹಾಗೂ ಜೈತೂನ್ ಹೋಟೆಲ್ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಮತ್ತು ಅವರ ಸಹೋದರ ಬಾಡಿಗೆಗೆ ಪಡೆದು ಹೊಟೇಲ್ ಅನ್ನು ನಡೆಸುತ್ತಿದ್ದರು. ಇತ್ತೀಚೆಗೆ ಉಡುಪಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕಟ್ಟಡವನ್ನೂ ಒಳಗೊಂಡಂತೆ 22 ಕಟ್ಟಡಗಳು ಅಕ್ರಮ ಎಂದು ಘೋಷಿಸಿ ತೆರವಿಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು ಆದರೆ ಈ ಒಂದು ಕಟ್ಟಡವನ್ನು ಬಿಟ್ಟು ಬೇರೆ ಯಾವ ಕಟ್ಟಡದ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸಿಲ್ಲ ಹಾಗೂ ಇವತ್ತು ನೆಲಸಮ ಗೊಳಿಸಿದ ಕಟ್ಟಡದ ಬದಿಯಲ್ಲೇ ಇರುವ ಒಂದು ಕಟ್ಟಡದ ಮೇಲಿನ ಎರಡು ಮಹಡಿಗಳಿಗೆ ಪರವಾನಿಗೆ ಇರಲಿಲ್ಲ, ಆ ಕಟ್ಟಡಕ್ಕೆ ತರಾತುರಿಯಲ್ಲಿ ಕೆಲವು ದಿನಗಳ ಹಿಂದೆ ಡೋರ್ ನಂಬರ್ ನೀಡಲಾಗಿತ್ತು.
ಒಟ್ಟಾರೆಯಾಗಿ ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ಉಡುಪಿ ಶಾಸಕ ರಘುಪತಿ ಭಟ್ ರವರ ಕುಮ್ಮಕ್ಕಿನಿಂದ ಈ ತೆರವು ಕಾರ್ಯ ನಡೆದಿದೆ ಇದನ್ನು ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ ಹಾಗೂ ಇದರ ವಿರುದ್ಧ ಹೋರಾಟವನ್ನು ನಡೆಸಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ..