ಉಡುಪಿ: ಕೇಂದ್ರ ಸರ್ಕಾರ ವಿರುದ್ಧ ಅಂಚೆ ನೌಕರರ ವತಿಯಿಂದ ಮಾ. 28 , 29ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ
ಉಡುಪಿ ಮಾ.25 (ಉಡುಪಿ ಟೈಮ್ಸ್ ವರದಿ) : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಹಾಗೂ ನೌಕರ ವಿರೋಧಿ ಇಬ್ಬಗೆ ನೀತಿ ಧೋರಣೆಗಳ ವಿರುದ್ಧ ಅಂಚೆ ನೌಕರರ ಕೇಂದ್ರ ಸಂಘಗಳು ಮತ್ತು ರಾಜ್ಯ ಸಂಘಗಳ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಮಾ. 28 ಮತ್ತು 29 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ ಎಂದು ಎನ್ ಎ ಪಿ ಇ ನ ಮುಖ್ಯಸ್ಥ ಪ್ರವೀಣ್ ಜತ್ತನ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಮುಷ್ಕರದ ಸಲುವಾಗಿ ವಲಯ ಮಟ್ಟದಲ್ಲಿ ಈಗಾಗಲೇ ಹಲವಾರು ಪ್ರತಿಭಟನಾ ಸರಣಿ ಕಾರ್ಯಕ್ರಮಗಳಿಗೆ ಪರಿಣಾಮಕಾರಿ ಚಾಲನೆ ನೀಡಲಾಗಿದೆ.
ನಾವು ಮುಷ್ಕರ ಪ್ರಿಯರಲ್ಲ. ಕೇಂದ್ರ ಸರಕಾರದ ನೌಕರ ವಿರೋಧಿ ಧೋರಣೆಗಳಿಂದಾಗಿ ಈ ಮುಷ್ಕರ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ.ನ್ಯಾಯ ಸಮ್ಮತ ಬೇಡಿಕೆಗಳ ಕುರಿತಾಗಿ ಗಂಭೀರವಾಗಿ ಪರಾಮರ್ಶಿಸಿ ಪ್ರತಿ ಒಬ್ಬರು ಈ ಮುಷ್ಕರದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಪ್ರಬಲ ಬಲಿಷ್ಠ ಹೋರಾಟಕ್ಕೆ ಕೈ ಜೋಡಿಸಬೇಕು. ಹಾಗೂ ಮಾ. 28 ರಂದು ಬೆಳಿಗ್ಗೆ 8.30 ಕ್ಕೆ ಉಡುಪಿ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಹಾಜರಿರಬೇಕಾಗಿ ಅವರು ಮನವಿ ಮಾಡಿಕೊಂಡರು.
ಹಾಗೂ ಒಂದೆಡೆ ನೂರಾರು ವರ್ಷಗಳ ಇತಿಹಾಸವಿರುವ ಸಾರ್ವಜನಿಕ ಇಲಾಖೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಸರಕಾರಿ ಮಟ್ಟದಲ್ಲಿ ವೇಗ ಪಡೆದುಕೊಂಡರೆ, ಇನ್ನೊಂದಡೆ ನಮ್ಮ ಮಹಾನ್ ನಾಯಕರು ಹೋರಾಟದ ಮೂಲಕ ಬಳುವಳಿಯಾಗಿ ನೀಡಿರುವ ಸೌಲಭ್ಯಗಳ ಹಕ್ಕು ಬಾಧ್ಯತೆಗಳಿಗೆ ಕತ್ತರಿ ಪ್ರಯೋಗ, ಇತ್ತ ನಮ್ಮ ವೃತ್ತಿ ಬದುಕು ಅಡಕತ್ತರಿಯಲ್ಲಿ ನಲುಗಿಕೊಂಡಿದೆ. ನಮ್ಮ ಮುಂದಿರುವ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ನಾವು ಗಂಭೀರವಾಗಿ ಯೋಚಿಸುವ ಕಾಲವಿದು. ಇಂತಹ ಕಠಿಣ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ಪ್ರತಿಭಟನೆ, ಪ್ರತಿರೋಧ ಒಡ್ಡದೇ ಹೋದಲ್ಲಿ ಇಲಾಖೆಯ ಅಸ್ತಿತ್ವ ನಮ್ಮ ಉಳಿವಿನ ಮಾತು ಮರೀಚಿಕೆ ಯಾಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಎನ್ ಎ.ಪಿ.ಇ ಅಧ್ಯಕ್ಷ ಸುರೇಶ್ ಕೆ., ಬಿ.ವಿಜಯ ನಾಯರಿ, ಎಐಪಿಇಯು ಕಾರ್ಯದರ್ಶಿ ಸುಹಾಸ್ ಉಪಸ್ಥಿತರಿದ್ದರು.