ಉಡುಪಿ: ಮಾ.6 ರಂದು ಜಿಲ್ಲಾ ರೈತ ಸಮಾವೇಶ -2022
ಉಡುಪಿ ಫೆ.28 (ಉಡುಪಿ ಟೈಮ್ಸ್ ವರದಿ) : ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ -2022 ಮಾ.6 ರಂದು ಬೆಳಿಗ್ಗೆ 9.30ರಿಂದ ಸಂಜೆ 4:00 ತನಕ ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಸಮಾವೇಶವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಈ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಅಸಿಸ್ಟೆಂಟ್ ಮ್ಯಾನೇಜರ್ ರಾಜಗೋಪಾಲ ಎಸ್. ಮತ್ತು ರೋಟೇರಿಯನ್ ಎಂ.ಪಿ.ಎಚ್.ಎಫ್, ಮಂಜುನಾಥ ಉಪಾಧ್ಯ ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಕೃಷಿ ವಿಚಾರ ಗೋಷ್ಠಿಗಳು ನಡೆಯಲಿದ್ದು, ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ. ಲಕ್ಷ್ಮಣ್, ಅಡಿಕೆ ಕೊಳೆ ರೋಗ ಹತೋಟಿ ಕುರಿತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ.ಧನಂಜಯ, ವೈಜ್ಞಾನಿಕ ಕೃಷಿ ಮತ್ತು ತರಬೇತಿ ಬಗ್ಗೆ ಬ್ರಹ್ಮಾವರ ಡಿಪ್ಲೋಮ ಕೃಷಿ ಮಹಾವಿದ್ಯಾಲಯದ ಡಾ. ಕೆ.ವಿ. ಸುಧೀರ್ ಕಾಮತ್, ಮಲ್ಲಿಗೆ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಉಪಯುಕ್ತತೆ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಎಚ್. ಎಸ್. ಚೈತನ್ಯ ಮಾತನಾಡಲಿದ್ದಾರೆ.
ಎರಡನೇ ವಿಚಾರ ಗೋಷ್ಠಿಯಲ್ಲಿ ಹೈನುಗಾರಿಕೆಯಲ್ಲಿ ಪೌಷ್ಠಿಕ ಆಹಾರದ ಬಳಕೆ ಮತ್ತು ಆರೋಗ್ಯ ರಕ್ಷಣೆ ವಿಷಯವಾಗಿ ಪಶುವೈದ್ಯಕೀಯ ಸೇವಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಸರ್ವೋತ್ತಮ ಉಡುಪ, ಹೈನುಗಾರಿಕೆಯಲ್ಲಿನ ಸವಾಲುಗಳು ಬಗ್ಗೆ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಲಾಭದಾಯಕ ಕೃಷಿಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮಂಗಳೂರು ಆಕಾಶವಾಣಿಯ ಟಿ. ಎಸ್. ಪ್ರಸಾದ್, ಸಮಗ್ರ ಕೃಷಿ ಪದ್ಧತಿಯ ಅವಶ್ಯಕತೆ ಬಗ್ಗೆ ಪ್ರಗತಿಪರ ಕೃಷಿಕ ಶಂಭು ಶಂಕರ ರಾವ್ ಮಂದಾರ್ತಿ ಮತ್ತು ಕರಾವಳಿಯಲ್ಲಿ ಲಾಭದಾಯಕ ತರಕಾರಿ ಬೆಳೆಗಳ ಬಗ್ಗೆ ಪಟ್ಲದ ಪ್ರಗತಿಪರ ಕೃಷಿಕ ಗುರುನಂದನ್ ನಾಯಕ್ ಮಾತನಾಡಲಿದ್ದಾರೆ.
ಬಳಿಕ ಮಧ್ಯಾಹ್ನ 3 ಗಂಟೆಗೆ ಸರಕಾರಿ ಇಲಾಖೆಗಳ ರೈತಪರ ಯೋಜನೆಗಳ ಕುರಿತು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ ಮತ್ತು ವಿದ್ಯುತ್ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.
ರಜತ ಸಂಭ್ರಮದ ಹಿನ್ನೆಲೆಯಲ್ಲಿ ರೈತ ಸಮಾವೇಶದಂದು ಜಿಲ್ಲೆಯ ಪ್ರಗತಿಪರ, ಸಂಘಟಕ,ಸಹಕಾರ ಮನೋಭಾವ ಮತ್ತು ವೈಜ್ಞಾನಿಕ ಕೃಷಿ ಮಾಡುತ್ತಿರುವ ಇಪ್ಪತ್ತೈದು ಮಂದಿ ಕೃಷಿಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗೂ ಈ ರೈತ ಸಮಾವೇಶದಲ್ಲಿ ಕೃಷಿ ಸಂಬಂಧಿತ ವಸ್ತು , ಯಂತ್ರೋಪಕರಣಗಳು, ಪತ್ರಿಕೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಕೃಷಿ ಆಸಕ್ತರು, ಕೃಷಿಕ ಬಾಂಧವರು ಈ ರೈತ ಸಮಾವೇಶದಲ್ಲಿ ಭಾಗವಹಿಸಿ, ಕಡಿಮೆ ಖರ್ಚು ಮತ್ತು ಶ್ರಮ ಬಳಸಿ ಅಧಿಕ ಇಳುವರಿ-ಲಾಭ ಪಡೆಯುವ ಕೃಷಿ-ತಂತ್ರಜ್ಞಾನಗಳ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.