ಸಾಗರ: ಶ್ವೇತ ವರ್ಣ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ
ಸಾಗರ ಫೆ.28: ರಾಜ್ಯದಲ್ಲಿಯೇ ಅಪರೂಪವಾಗಿರುವ ಶ್ವೇತ ವರ್ಣದ ಶಿವಲಿಂಗವಿರುವ ಸಾಗರದ ಕಾರ್ಗಲ್ ಸಮೀಪದ ಗುಂಡೀಬೈಲು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ಮಹಾಶಿವರಾತ್ರಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1997ರಲ್ಲಿ ಅಂದಿನ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಈ ಅಪರೂಪದ ಶಿವಲಿಂಗದ ಭದ್ರತೆಗಾಗಿ ಸರ್ಕಾರದ ಆರಾಧನಾ ಯೋಜನೆಯಡಿಯಲ್ಲಿ ಪುಟ್ಟ ದೇವಾಲಯವೊಂದನ್ನು ಕಟ್ಟಿಸಿದ್ದರು. ಬಳಿಕ 1998 ರಲ್ಲಿ ಶಿವಲಿಂಗವನ್ನು ಮರಾಠಿ ಜನಾಂಗದ ಸಮುದಾಯದೊಂದಿಗೆ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಆದಿವಾಸಿ ಜನಾಂಗದವರು, ಕುಗ್ರಾಮದ ಗ್ರಾಮಸ್ಥರು ಸರಳವಾಗಿ ಮಹಾಶಿವರಾತ್ರಿಯಂದು ಜಾತ್ರೆ ನಡೆಸ ತೊಡಗಿದರು. ಸಮಯ ಕಳೆದಂತೆ ಈ ಜಾತ್ರಾಮಹೋತ್ಸವ ವೈಭವದಿಂದ ನಡೆಯುತ್ತಿದೆ.
ನಾಡಿಗೆ ಬೆಳಕು ನೀಡಲು ಈ ಭಾಗದ ಅನೇಕ ಗ್ರಾಮಗಳು ಮುಳುಗಡೆಯಾದ ಸಮಯದಲ್ಲಿ ನೀರಿನಡಿಯಲ್ಲಿ ಸೇರಿದ ಶಿವಾಲಯದಲ್ಲಿದ್ದ 4 ಅಡಿ ಎತ್ತರದ ಈ ಬಿಳಿ ಶಿವಲಿಂಗವನ್ನು ಯಾರೋ ತಳಕಳಲೆ ಜಲಾಶಯದ ಹಿನ್ನೀರಿನ ದಡದ ನೀರಿನಲ್ಲಿ ಮುಳುಗಿಸಿಟ್ಟಿದ್ದರು. ಕಾಲ ಕ್ರಮೇಣ ಗುಂಡೀಬೈಲು ಮರಾಠಿಕೇರಿ ಭಾಗದ ಕುಡಬಿ ಮರಾಠಿ ಜನಾಂಗದ ಹಿರಿಯರೊಬ್ಬರಿಗೆ ಈ ಶಿವಲಿಂಗ ಕಂಡು ಬಂತು. ಅವರು ಗ್ರಾಮಸ್ಥರ ಸಹಾಯದೊಂದಿಗೆ ಹಿನ್ನೀರ ದಡದ ಎತ್ತರದ ಗುಡ್ಡದ ಮೇಲೆ ಪುಟ್ಟ ಮಣ್ಣಿನಿಂದ ನಿರ್ಮಿಸಿದ ಗುಡಿ ಕಟ್ಟಿ ಲಿಂಗವಿರಿಸಿ ಪೂಜಿಸಲಾರಂಭಿಸಿದರು ಎಂದು ಹೇಳಲಾಗುತ್ತದೆ.
ಶ್ವೇತ ವರ್ಣದಿಂದ ಕಂಗೊಳಿಸುವ ಈ ಶಿವಲಿಂಗ 4 ಅಡಿ ಎತ್ತರವಿದೆ. ಬೆಲೆ ಕಟ್ಟಲಾರದ ಶಿಲಾಪದರು ಎಂಬ ಮಾಹಿತಿಯ ಕಾರಣ ಲಿಂಗವನ್ನು 3 ಅಡಿಗಳಷ್ಟು ಪೀಠದ ಒಳಭಾಗದಲ್ಲಿರಿಸಿ ಸಂರಕ್ಷಿಸಲಾಗಿದೆ. ಶಿವಲಿಂಗದ ಮೇಲೆ ಬೆಳಕು ಚೆಲ್ಲಿದರೆ, ಬೆಳಕನ್ನು ತನ್ನೊಳಗಿನಿಂದ ಹೊರಸೂಸುವ ಗುಣವನ್ನು ಈ ಶಿಲೆ ಹೊಂದಿದೆ. ಇಂಥ ಗುಣ ಹೊಂದಿರುವ ಈ ಶಿವಲಿಂಗ ತೀರ್ಥರಾಮೇಶ್ವರ ಹೊರತುಪಡಿಸಿದರೆ ಇಲ್ಲಿ ಮಾತ್ರ ಇದೆ ಎಂಬುದು ಇತಿಹಾಸ ಸಂಶೋಧಕರು ಹೇಳುತ್ತಾರೆ.
ಕಾಳುಮೆಣಸಿನ ರಾಣಿ ಎಂದು ಖ್ಯಾತಿ ಪಡೆದಿದ್ದ ಗೇರುಸೊಪ್ಪ ಪ್ರಾಂತ್ಯದ ರಾಣಿ ಚೆನ್ನಾಭೈರಾದೇವಿ ಕಾಲದ್ದು ಎನ್ನಲಾದ ಶ್ವೇತ ವರ್ಣದ ಶಿವಲಿಂಗದ ಸನ್ನಿಧಿಯಲ್ಲಿ ಶರಾವತಿ ಕಣಿವೆಯ ಭಕ್ತರು ಶ್ರದ್ಧಾ ಭಕ್ತಿಯಿಂದ ನಡೆದು ಕೊಳ್ಳುತ್ತಾರೆ. ಈ ಶ್ವೇತ ಶಿವಲಿಂಗದ ದರ್ಶನ ಸುಲಭ ವಾದದ್ದಲ್ಲ. ಇಲ್ಲಿನ ಜೋಗ ಜಲಪಾತದಿಂದ 3 ಕಿಮೀ ದೂರವಿರುವ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಮೊದಲು ಭದ್ರತಾ ಪರವಾನಗಿ ಪಡೆಯಬೇಕು. ನಂತರ ಬ್ರಿಡ್ಜ್ ಕ್ಯಾಂಪ್ ಮುಖ್ಯ ಭದ್ರತಾ ಗೇಟ್ ಮೂಲಕ ಹೆನ್ನಿ ವಡನ್ ಬೈಲು ಮಾರ್ಗವಾಗಿ 4 ಕಿಮೀ ಕ್ರಮಿಸಿದರೆ ಶರಾವತಿ ಹಿನ್ನೀರ ದಡದಲ್ಲಿ ನೆಲೆಗೊಂಡಿರುವ ಗುಂಡೀಬೈಲು ಮರಾಠಿಕೇರಿಯಲ್ಲಿರುವ ಪಂಚಲಿಂಗೇಶ್ವರ ದೇಗುಲದಲ್ಲಿ ಬಿಳಿ ಶಿವಲಿಂಗದ ದರ್ಶನ ಪಡೆಯಬಹುದಾಗಿದೆ.