ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಪ್ರಾಂಶುಪಾಲರಿಂದ ನಿರಾಕರಣೆ: ವಿದ್ಯಾರ್ಥಿನಿಯರ ಆರೋಪ
ಉಡುಪಿ, (ಉಡುಪಿ ಟೈಮ್ಸ್ ವರದಿ) : ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆ ಬರೆಯಲು ಪ್ರಾಂಶುಪಾಲರು ನಿರಾಕರಿಸಿದ್ದಾರೆ ಎಂದು ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್. ಆರೋಪಿಸಿದ್ದಾರೆ.
ದ್ವಿತೀಯ ಪಿಯು ವಿದ್ಯಾರ್ಥಿನಿಯರಾದ ಅಲ್ಮಾಝ್, ಹಝ್ರ ಶಿಫಾ ಹಾಗೂ ಬೀಬಿ ಆಯಿಶ ಅವರಿಗೆ ಇಂದು ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್. ಅವರು, ನಮ್ಮ ಪೈಕಿ ನಾನು ಸೇರಿದಂತೆ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡಿಲ್ಲ ಹಾಗೂ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿ ಕಳುಹಿಸಿರುವುದಾಗಿ ಆರೋಪಿಸಿದ್ದಾರೆ ಹಾಗೂ ಹಿಜಾಬ್ ವಿರುದ್ಧ ಬಿತ್ತಿದ ದ್ವೇಷದಿಂದಾಗಿ ಕಾಲೇಜಿನಿಂದ ನಾನು ಹೊಂದಿದ್ದ ಭರವಸೆಗಳು ಮತ್ತು ನನ್ನ ಕನಸುಗಳು ಛಿದ್ರವಾಗುತ್ತಿವೆ
ಎಂದು ಹೇಳಿಕೊಂಡಿದ್ದಾರೆ.
“ನಾವು ರೆಕಾಡ್ರ್ಸ್ ಪುಸ್ತಕಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಬಹಳ ಉತ್ಸುಕರಾಗಿ ಹೋಗಿದ್ದೆವು. ಆದರೆ ಕಾಲೇಜು ತಲುಪಿದಾಗ ನಮ್ಮ ಪ್ರಾಂಶುಪಾಲರು “ನೀವು ಇಲ್ಲಿಂದ ಐದು ನಿಮಿಷದಲ್ಲಿ ಹೊರಡಬೇಕು. ಇಲ್ಲವಾದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ” ಎಂದು ನಮಗೆ ಬೆದರಿಕೆ ಹಾಕಿದಾಗ ತುಂಬಾ ಬೇಸರವಾಯಿತು” ಎಂದು ಬರೆದುಕೊಂಡಿದ್ದಾರೆ.