ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿಯವರ ಕೀರ್ತಿ ಜಗದುದ್ದಗಲಕ್ಕೂ ಹಬ್ಬಿದೆ: ವಿದ್ಯಾಪ್ರಸನ್ನಶ್ರೀ

ಕುಂದಾಪುರ.ಫೆ .27(ಉಡುಪಿ ಟೈಮ್ಸ್ ವರದಿ): ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರಿನ ಅಭಿನಂದನಾ ಸಮಾರಂಭ ನಿನ್ನೆ( ವಕ್ವಾಡಿ ಫಾರ್ಚೂನ್ ವಿಲೇಜ್ ಹೊಟೇಲ್ ಬಳಿ ಅದ್ಧೂರಿ ವೇದಿಕೆಯಲ್ಲಿ ನಡೆಯಿತು.

ಸಮಾರಂಭವನ್ನು ಶ್ರೀಸುಬ್ರಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಉದ್ಘಾಸಿದರು. ಬಳಿಕ ಆಶಿರ್ವಚನೆ ನೀಡಿದ ಅವರು, ಸರಳ ಸಜ್ಜನಿಕೆಯ ಸಾಮಾಜಿಕ ಕಳಕಳಿಯ ವಕ್ವಾಡಿಯ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸಾಧನೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬದುಕಿಗೆ ಅರ್ಥವನ್ನು ಹುಡುಕುತ್ತಾ ಹೋದಾಗ ಪರವೂರಿನಲ್ಲಿ ನೆಲೆಸಿ ಊರಿಗೂ ಉಪಕಾರಿಯಾಗಿ ಸಾರ್ಥಕತೆ ಪಡೆದ ವ್ಯಕ್ತಿಗೆ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಹಾಗೂ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಜೀವನದ ಎಲ್ಲಾ ಸೌಲಭ್ಯ ಊರಿಗೂ ವಿಸ್ತರಿಸಿದ ಸಾಮಾಜಿಕ ಚಿಂತನೆಯುಳ್ಳವರು. ಅಸಾಧಾರಣ ಸಾಧನೆ ಮಾಡಿದವರಿಗೆ ಸನ್ಮಾನ ನೀಡಲೇಬೇಕಾಗಿರುವುದು ಅಗತ್ಯ. ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿ ಯವರ ಕೀರ್ತಿ ಜಗದುದ್ದಗಲಕ್ಕೂ ಹೊರಹೊಮ್ಮಿದೆ. ಹಾಗೂ ಅವರ ಈ ಕಾರ್ಯ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು.

ಪ್ರವೀಣ್ ಶೆಟ್ಟಿ ಯಾವುದೇ ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಂಡವರಲ್ಲ :ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರು ಮಾತನಾಡಿ, ಪ್ರವೀಣ್ ಶೆಟ್ಟಿ ಯವರು ಯಾವುದೇ ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಂಡವರಲ್ಲ, ಪ್ರವೀಣ್ ಶೆಟ್ಟಿಯವರು ದುಬೈನಲ್ಲಿ ದೊಡ್ಡದಾಗಿ ಉದ್ಯಮ ಸ್ಥಾಪಿಸಿ ಆ ಲಾಭದಲ್ಲಿ ಬಹುಪಾಲು ಹಣ ಊರಿಗೆ ನೀಡುತ್ತಿದ್ದು ಇಂತಹ ಸಾಧಕರು ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು. ಹಾಗೂ ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರವಿಲ್ಲದೆ ಸಾಧನೆ ಮಾಡಿದವರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಆಯ್ಕೆ ಸಮಿತಿಗೆ ಓರ್ವ ಸಚಿವನಾಗಿ ಸೂಚಿಸಿದ್ದೆ. ಅಂತೆಯೇ ಕೊರೋನಾ ಸಂದರ್ಭದಲ್ಲಿ ವಿದೇಶ ಹಾಗೂ ತನ್ನ ಊರಿನಲ್ಲಿ ಮಾಡಿದ ಸೇವಾ ಕಾರ್ಯ, ದುಬೈನಲ್ಲಿ ಅವರಿಗೆ ನಡೆದ ಸನ್ಮಾನಗಳನ್ನು ಗುರುತಿಸಿ ಪ್ರವೀಣ್ ಕುಮಾರ್ ಶೆಟ್ಟಿಯವರು ಅರ್ಜಿ ಹಾಕದಿದ್ದರೂ ಕೂಡ ಆಯ್ಕೆ ಸಮಿತಿ ಹೊರ ನಾಡುಕನ್ನಡ ವಿಭಾಗದಲ್ಲಿ ಆಯ್ಕೆ ಮಾಡಿದ್ದು ಅವರಿಗೆ ಸಿಕ್ಕ ಪ್ರಶಸ್ತಿ ಕರ್ನಾಟಕ ರಾಜ್ಯಕ್ಕೆ ಹಾಗೂ ಇಲಾಖೆಗೆ ಸಿಕ್ಕ ಪ್ರಶಸ್ತಿ. ಈ ಸನ್ಮಾನದ ಮೂಲಕ ಇತರರಿಗೆ ಸಾಧನೆಯ ಪ್ರೇರಣೆ ಸಿಗಲಿ ಎಂದರು. ಇದೇ ಅವರು, ಪ್ರವೀಣ್ ಶೆಟ್ಟಿಯವರು ಪ್ರಸಾದ್ ನೇತ್ರಾಲಯಕ್ಕೆ ಕೊಡುಗೆಯಾಗಿ ನೀಡಿದ ಅಂಬುಲೆನ್ಸ್ ವಾಹನದ ಕೀಲಿಕೈನ್ನು ಹಸ್ತಾಂತರಿಸಿದರು.

ಸ್ಮರಣ ಸಂಚಿಕೆ ಬಿಡುಗಡೆ: ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ದುಬೈನಲ್ಲಿಯೂ ಕೂಡ ಕನ್ನಡ ಶಾಲೆಯ ಉಳಿವಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರವೀಣ್ ಶೆಟ್ಟಿಯವರು ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಡಿದ ಸಮಾಜಸೇವೆ ಅನುಕರಣೀಯ. ನನ್ನ ಶಾಲೆ ನನ್ನ ಕೊಡುಗೆ ಎಂಬ ಇಲಾಖೆಯ ಕಾರ್ಯಕ್ರಮದಡಿ ವಕ್ವಾಡಿಯ ಶಾಲೆ ದತ್ತು ಪಡೆಯವ ಒಡಂಬಡಿಕೆಯನ್ನು ಪ್ರವೀಣ್ ಕುಮಾರ್ ಶೆಟ್ಟಿ ಮಾಡಿದ್ದಾರೆ ಎಂದು ಸಚಿವರು ಘೋಷಿಸಿದರು.

ಹುಟ್ಟೂರಿನ ಸನ್ಮಾನದ ನೆನಪು ಅವಿಸ್ಮರಣೀಯ:ಹುಟ್ಟೂರು ಸನ್ಮಾನ ಸ್ವೀಕರಿಸಿ ಮಾತಾಡಿದ ಪ್ರವೀಣ್ ಕುಮಾರ್ ಶೆಟ್ಟಿ ಯವರು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಬಳಿಕ ಪುನೀತ್ ಇಲ್ಲದ ನೋವು ಕಾಡಿತ್ತು. ಎಲ್ಲಡೆ ಸನ್ಮಾನಗಳನ್ನು ಪಡೆದರೂ ಕೂಡ ಹುಟ್ಟೂರಿನಲ್ಲಿ ನಡೆದ ಸನ್ಮಾನ ಕೊನೆ ಉಸಿರು ಇರುವ ತನಕ ಮರೆಯೋದಿಲ್ಲ ಎಂದರು. ಇದೇ ಸಂದರ್ಭದಲ್ಲಿ 17 ಮಂದಿ ಅಶಕ್ತರಿಗೆ ವೈದ್ಯಕೀಯ ನೆರವಿನ ಸಹಾಯಧನ ವಿತರಿಸಲಾಯಿತು. ವಕ್ವಾಡಿ ಶಾಲೆಯ 25 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ಉದ್ಯಮಿ ಕೆ. ನಾಗರಾಜ್, ಯುಎಇ ಕನ್ನಡಿಗಾಸ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಹುಟ್ಟೂರ ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ವಕ್ವಾಡಿ ಪ್ರವೀಣ್ ಶೆಟ್ಟಿಯವರ ಧರ್ಮಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ, ಜಿ.ಪಿ. ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಟ-ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ, ಮಂಗಳೂರು ಶ್ರೀ ರಾಮಕೃಷ್ಣ ಡಿಗ್ರಿ ಕಾಲೇಜು ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಹೆಗ್ಡೆ , ದಿನಕರ್ ಆರ್. ಶೆಟ್ಟಿ , ಬಾಲಕೃಷ್ಣ ಶೆಟ್ಟಿ , ಸತೀಶ್ ಪೂಜಾರಿ, ಸದಾನಂದ ಶೆಟ್ಟಿ, ಉಪಸ್ಥಿತರಿದ್ದರು. ಪತ್ರಕರ್ತ ಕೆ.ಸಿ ರಾಜೇಶ್, ಮಹೇಶ್ ವಕ್ವಾಡಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!