ಗಾಂಜಾ ಸಾಗಾಟ ಪತ್ತೆ ನಾಲ್ವರು ಆರೋಪಿಗಳ ಬಂಧನ
ಪುತ್ತೂರು: ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಎಂಬಲ್ಲಿ ನಡೆದಿದೆ.
ಕೇರಳ ರಾಜ್ಯದ ಪೈವಳಿಕೆ ಗ್ರಾಮದ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್(26), ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ರಿಯಾಝ್(27), ಪುತ್ತೂರು ತಾಲೂಕಿನ ಕಬಕ ನಿವಾಸಿ ಅಬ್ದುಲ್ ಖಾದರ್ ಜಾಬಿರ್(23) ಮತ್ತು ಬನ್ನೂರು ನಿವಾಸಿ ಅಬ್ದುಲ್ ನಝೀರ್(37) ಬಂಧಿತ ಆರೋಪಿಗಳು. ಆರೋಪಿಗಳು ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಿಗೆ ಗಾಂಜಾವನ್ನು ಮಾರಾಟ ಮಾಡಲು 2 ಕಾರುಗಳಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ 1.25 ಲಕ್ಷ ರೂ. ವೌಲ್ಯದ 6 ಕೆಜಿ 360 ಗ್ರಾಂ ಗಾಂಜಾ, ಐದು ಮೊಬೈಲ್‌ಗಳು ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.