ಮಲ್ಪೆ: ಹೋಟೆಲ್ ಮೇಲೆ ಕಲ್ಲು ತೂರಾಟ ಪ್ರಕರಣ, ಹಲವರ ಮೇಲೆ ದೂರು ದಾಖಲು
ಉಡುಪಿ, ಫೆ.22 : ಹಿಜಾಬ್ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯ ತಂದೆಯ ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಸಹೋದರನಿಗೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆ.21ರಂದು ರಾತ್ರಿ ಬೈಕಿನಲ್ಲಿ ಬಂದ ದೀಪಕ್ ಕುಮಾರ್ ಹಾಗೂ ಇತರರು ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜನ್ನು ಪುಡಿಗೈದು, ಬಳಿಕ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಹಲ್ಲೆಗೊಳಗಾದ ಸೈಫ್ ನೀಡಿದ ದೂರಿನಂತೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಹಿಜಾಬ್ ಸಂಬಂಧ ನ್ಯಾಯ ಕೇಳಿ ಹೈಕೋರ್ಟ್‌ಗೆ ಮೊರೆ ಹೋದ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ನೀಡಿದ ಖಾಸಗಿ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ ಪರಿಣಾಮ ಈ ಕೃತ್ಯ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮಾತ್ರವಲ್ಲದೆ ದಾಖಲೆಗಳ ಸೋರಿಕೆಯಿಂದಾಗಿ, ಮೊಬೈಲ್ ಸಂಖ್ಯೆ ಆಧಾರದಲ್ಲಿ ಈ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಮತ್ತು ಅದರಲ್ಲಿನ ವಿಳಾಸಗಳ ಮೂಲಕ ಅವರ ಮನೆ ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು ಎಂದು ದೂರಲಾಗಿದೆ. ಅದೇ ರೀತಿ ಇತ್ತೀಚೆಗೆ ಮಾಧ್ಯಮವೊಂದು ಹಿಡನ್ ಕ್ಯಾಮೆರಾದ ಮೂಲಕ ಶಿಫಾನ ತಂದೆಯ ಹೊಟೇಲಿಗೆ ಹೋಗಿ ತಂದೆಯೊಂದಿಗೆ ಮಾತುಕತೆ ನಡೆಸಿದ್ದು, ಈ ವಿಡಿಯೋ ರವಿವಾರ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.
ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋದೊಂದಿಗೆ ಶಿಫಾಳ ತಂದೆ ಹೊಟೇಲಿನಲ್ಲಿ ಯಾರು ವ್ಯಾಪಾರ ನಡೆಸದಂತೆ ಅಪಪ್ರಚಾರ ನಡೆಸಲಾಯಿತು. ಇದರ ಪರಿಣಾಮವಾಗಿ ಕೆಲವು ದುಷ್ಕರ್ಮಿಗಳು ಹೊಟೇಲಿಗೆ ದಾಳಿ ನಡೆಸಿ ಸೈಫ್‌ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿ ಹಝ್ರ ಶಿಫಾ ಟ್ವೀಟ್ ಮಾಡಿದ್ದು, ನಾನು ನನ್ನ ಹಕ್ಕು ಆಗಿರುವ ಹಿಜಾಬ್ ಪರ ಹೋರಾಟ ಮುಂದುವರಿಸಿದ ಕಾರಣಕ್ಕಾಗಿ ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ಅಲ್ಲದೆ ನಮ್ಮ ಆಸ್ತಿಗೂ ಹಾನಿ ಮಾಡಲಾಗಿದೆ. ನಾನು ನನ್ನ ಹಕ್ಕನ್ನು ಕೇಳಬಾರದೇ? ಅವರ ಮುಂದಿನ ಬಲಿಪಶು ಯಾರು? ಈ ಕೃತ್ಯ ಎಸಗಿರುವ ಸಂಘಪರಿವಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಉಡುಪಿ ಪೊಲೀಸ್ ಇಲಾಖೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.