ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ದಾಳಿ ಭೀತಿ ಭಾರತೀಯರನ್ನು ಮರಳಿ ತರಲು 3 ವಿಶೇಷ ವಿಮಾನ ಸಜ್ಜು
ನವದೆಹಲಿ, ಫೆ. 22 : ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ದಾಳಿ ಭೀತಿ ಹಿನ್ನೆಲೆಯಲ್ಲಿ ಮೂರು ವಿಶೇಷ ವಿಮಾನಗಳ ಮೂಲಕ ತನ್ನ ಪ್ರಜೆಗಳನ್ನು ಕರೆತರಲು ಭಾರತ ಮುಂದಾಗಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಭಾರತೀಯರು ಯಾವುದೇ ವಾಣಿಜ್ಯ ವಿಮಾನ ಅಥವಾ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗಬಹುದು ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇತ್ತೀಚಿಗೆ ಹೇಳಿತ್ತು.
ಆದ್ದರಿಂದ ತನ್ನ ಪ್ರಜೆಗಳನ್ನು ಕರೆತರಲು ಭಾರತ ಮುಂದಾಗಿದ್ದು,
ಟಾಟಾ ಒಡೆತನದ ಏರ್ ಇಂಡಿಯಾದ (ಎಐ) ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್ (ಬೊರಿಸ್ಪಿಲ್) ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲಿದೆ.
200 ಆಸನಗಳ ಸಾಮರ್ಥ್ಯದ ಡ್ರೀಮ್ ಲೈನರ್ B-787 ವಿಮಾನವು ಇಂದು ರಾತ್ರಿ ಉಕ್ರೇನ್ನಿಂದ ದೆಹಲಿಗೆ ಬಂದಿಳಿಯಲಿದೆ. ಉಳಿದಂತೆ ಫೆ.24 ಮತ್ತು ಫೆ.26ರಂದು ಎರಡು ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆತರಲಿದೆ.
ರಷ್ಯಾದೊಂದಿಗೆ ಉಕ್ರೇನ್ ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತವು, ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಎಲ್ಲಾ ಕಡೆಯವರು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವ ಅಗತ್ಯವನ್ನು ಬಲವಾಗಿ ಒತ್ತಿ ಹೇಳಿತ್ತು.