ಮಲ್ಪೆ : ಹೋಟೆಲ್ ಮೇಲೆ ದಾಳಿ ಶಾಸಕ ರಘುಪತಿ ಭಟ್ ಕೈವಾಡ ಶಂಕೆ: ಆಸೀಲ್ ಅಕ್ರಂ ಆರೋಪ
ಉಡುಪಿ ಫೆ.22 (ಉಡುಪಿ ಟೈಮ್ಸ್ ವರದಿ) : ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕೋರ್ಟ್ ಮೆಟ್ಟಲೇರಿದ್ದ ವಿದ್ಯಾರ್ಥಿನಿಯ ತಂದೆಗೆ ಸೇರಿದ ಹೋಟೆಲ್ ವೊಂದರ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಪ್ರಕರಣದಲ್ಲಿ ಶಾಸಕ ರಘುಪತಿ ಭಟ್ ಅವರ ಕೈವಾಡ ಇರುವುದಾಗಿ ಸಿಎಫ್ಐ ನ ಉಡುಪಿ ಜಿಲ್ಲಾಧ್ಯಕ್ಷ ಆಸೀಲ್ ಅಕ್ರಂ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯ ಸಹೋದರನಿಗೆ 4 ರಿಂದ 6 ಮಂದಿ ಹೊಡೆದಿದ್ದಾರೆ ಮಾತ್ರವಲ್ಲದೆ ಹೋಟೆಲ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಇದಕ್ಕೂ ಎಬಿವಿಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ. ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಶಾಸಕ ರಘುಪತಿ ಭಟ್ ಅವರು ಹಿಜಾಬ್ ವಿಚಾರವಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ನೋಡಿದರೆ ಇವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಹಾಗೂ ಈ ಘಟನೆ ಹಿಂದೆ ಶಾಸಕ ರಘುಪತಿ ಭಟ್ ಅವರ ಕೈವಾಡ ಇರುವ ಸಂಶಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೆ ಮೊದಲಿನಿಂದಲೂ ಬರುತ್ತಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ಮೊದಲು ಕಾಲೇಜು ಮಟ್ಟದಲ್ಲಿಯೇ ಪರಿಹರಿಸಲು ಪ್ರಯತ್ನಿಸಿದ್ದಾರೆ. ಆ ಬಳಿಕ ಕ್ಯಾಂಪಸ್ ಫ್ರಂಟ್ ಬಳಿ ಬಂದಿದ್ದಾರೆ ಎಂದರು.
ಇದೇ ವೇಳೆ ಹೈ ಕೋರ್ಟ್ ನಲ್ಲಿ ಹಿಜಾಬ್ ಪರವಾಗಿ ತೀರ್ಪು ಬರುತ್ತದೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಹಿಜಾಬ್ ಪರವಾಗಿರುವ ಅಂಶಗಳು ವ್ಯಕ್ತ ವಾಗಿದ್ದು ತೀರ್ಪು ಹಿಜಾಬ್ ಪರವಾಗಿ ಬರಲಿದೆ ಎಂಬ ಸಂಪೂರ್ಣ ಭರವಸೆಯಿದೆ ಎಂದು ತಿಳಿಸಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕೋರ್ಟ್ ಮೆಟ್ಟಲೇರಿದ್ದ ವಿದ್ಯಾರ್ಥಿನಿಯ ತಂದೆಗೆ ಸೇರಿದ ಹೋಟೆಲ್ ವೊಂದರ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಸಹೋದರನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.