ಬೆಂಗಳೂರು: ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

ಬೆಂಗಳೂರು, ಜ.12: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ರೂಪಾಂತರಿ ಮತ್ತು ಕೊರೊನಾ ಮೂರನೇ ಅಲೆಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಇಂಥ ಕ್ಲಷ್ಟಕರವಾದ ಸಮಯದಲ್ಲಿ ವಿಪಕ್ಷ ಕಾಂಗ್ರೆಸ್ ನಾಯಕರು ಕೊರೊನಾ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ . ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದಾರೆ.

ಕೆಪಿಸಿಸಿ ಪಾದಯಾತ್ರೆಯಿಂದ ಕೊರೊನಾ ಸೋಂಕು ಹಬ್ಬುತ್ತದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೇ ನಾಯಕರು ಮಕ್ಕಳನ್ನು ಭೇಟಿ ಮಾಡಿದ್ದಾರೆ. ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಪಿಐಎಲ್ ವಿಚಾರಣೆಗೆ ಹೈಕೋರ್ಟ್ ಸಮ್ಮತಿ ನೀಡಲಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕನಕಪುರದ ಸಂಗಮದಿಂದ ಭಾನುವಾರದಿಂದ ಪಾದಯಾತ್ರೆ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಕೋವಿಡ್ ಪರೀಕ್ಷೆಗೆ ನಿರಾಕರಿಸಿದ್ದು, ಟೀಕೆಗೆ ಗುರಿಯಾಗಿದೆ.

ಈಗಾಗಲೇ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಚಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಸಿಎಂ ಇಬ್ರಾಯಿಂ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕಿ, ಮಾಜಿ ಶಾಸಕಿ ಮಲ್ಲಾಜಮ್ಮಗೆ ಕೊರೊನಾ ಸೋಂಕು ತಗುಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪಸಮುದ್ರ ಗ್ರಾಮದ ಮನೆಯಲ್ಲಿ ಮಲ್ಲಾಜಮ್ಮ ಐಸೋಲೇಷನ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!