ಇಂದ್ರಾಳಿ ಮುಖ್ಯ ರಸ್ತೆ ಅಪೂರ್ಣ ಕಾಮಗಾರಿ ಸಾರ್ವಜನಿಕರ ಆಕ್ರೋಶ
ಉಡುಪಿ ಜ.4 (ಉಡುಪಿ ಟೈಮ್ಸ್ ವರದಿ): ಆಮೆಗತಿಯಲ್ಲಿ ಸಾಗುತ್ತಿರುವ ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಇಂದ್ರಾಳಿಯ ರೈಲ್ವೆ ಸೇತುವೆಯ ಅಪೂರ್ಣ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ಕಾಮಗಾರಿ ಆರಂಭಕ್ಕೆ ಮುನ್ನುಡಿ ಹಾಡಿ ಒಂದು ವರ್ಷವಾಗುತ್ತಾ ಬರುತ್ತಿದೆ. 2021 ರ ಫೆಬ್ರವರಿ ಅಂತ್ಯದಲ್ಲಿ ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ರೈಲ್ವೇ ಸುರಕ್ಷತಾ ಆಯುಕ್ತರು (ಸಿಆರ್ ಎಸ್) ಹೆದ್ದಾರಿ ಇಲಾಖೆಯವರಿಗೆ ಅನುಮತಿ ನೀಡುವ ಮೂಲಕ ಕಾಮಗಾರಿ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದರು. ಈ ನಡುವೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಕೂಡಾ ಆರಂಭ ಗೊಂಡಿತ್ತು. ಇದೀಗ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಕೆಲಸ ಮಾತ್ರ ಕುಂಟುತ್ತಾ ಸಾಗುತ್ತ ಇದೆ.
100-150 ಅಡಿಯ ರೈಲ್ವೆ ಸೇತುವೆಯನ್ನು ಮುಗಿಸಲು ಇಷ್ಟೊಂದು ದೀರ್ಘ ಸಮಯವನ್ನು ತೆಗೆದು ಕೊಳ್ಳುವುದನ್ನು ನೋಡಿದರೆ ರೈಲ್ವೆ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮತ್ತೊಂದೆಡೆ ಪಕ್ಕದ ರಸ್ತೆಯ ಕಿತ್ತುಹೋಗಿದ್ದು ಸಾರ್ವಜನಿಕರು ವಾಹನ ಚಲಾಯಿಸಲು ಕಷ್ಟಪಡುವಂತಾಗಿದೆ. ಈ ಭಾಗದಲ್ಲಿ ಸ್ಥಳೀಯ ಆಡಳಿತ ಸೇತುವೆಯ ಎರಡೂ ಬದಿಯ ಡಾಮಾರು ಕಿತ್ತುಹೋದ ರಸ್ತೆಗೆ ತೇಪೆ ಹಾಕಿದೆ. ಆದರೆ ಈ ಹಿಂದೆ ಹಾಕಲಾದ ಡಾಮಾರು ಕಿತ್ತು ಹೋಗಿದ್ದು, ಜೆಲ್ಲಿ ಕಲ್ಲು ಮೇಲೆದ್ದಿವೆ. ಪರಿಣಾಮ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸ್ಕಿಡ್ ಆಗುತ್ತಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಅಲ್ಲದೆ ಹೊಂಡಗುಂಡಿಗಳಿಂದ ಸಂಚಾರದ ವೇಳೆ ಬ್ಯಾಲೆನ್ಸ್ ತಪ್ಪಿ ಅಪಾಯ ಸಂಭವಿಸುವ ಸಾಧ್ಯತೆಗಳೂ ಹೆಚ್ಚಿದೆ.
ಆದ್ದರಿಂದ ಈ ಭಾಗದ ರಸ್ತೆ ದುರಾವಸ್ಥೆಗೆ ಸಾರ್ವಜನಿಕರು ಹಾಗೂ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಗಂಭೀರ ಸ್ವರೂಪದ ಅಪಘಾತ, ದುರಂತ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆ ಮುತುವರ್ಜಿ ವಹಿಸಿ ಶೀಘ್ರ ಈ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.