ರಾಜ್ಯ ಸರ್ಕಾರದ 50% ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳಲ್ಲಿ ಬಿ, ಸಿ ಮತ್ತು ಡಿ ದರ್ಜೆಯ ಶೇಕಡ 50ರಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.

ʼಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ಉಳಿದ ಇಲಾಖೆಗಲಲ್ಲಿ ಎ ದರ್ಜೆಯ ಎಲ್ಲ ಅಧಿಕಾರಿಗಳೂ ಕಚೇರಿಗೆ ಹಾಜರಾಗಬೇಕು. ಬಿ, ಸಿ ಮತ್ತು ಡಿ ದರ್ಜೆಯ ನೌಕರರಲ್ಲಿ ಅರ್ಧದಷ್ಟು ಮಂದಿ ಸರದಿಯ ಆಧಾರದಲ್ಲಿ ಕಚೇರಿಗೆ ಹಾಜರಾಗಬೇಕುʼ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕಚೇರಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿದ್ದರೂ, ಇಲಾಖೆಯ ಕಾರ್ಯದರ್ಶಿ ಅಥವಾ ಮುಖ್ಯಸ್ಥರು ಇಚ್ಛಿಸಿದಲ್ಲಿ ಅಂತಹ ಅಧಿಕಾರಿ ಅಥವಾ ನೌಕರರು ಯಾವುದೇ ಕಾರಣ ನೀಡದೇ ಹಾಜರಾಗಬೇಕು. ಕೋವಿಡ್‌ಗೆ ಸಂಬಂಧಿಸಿದ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ನೌಕರರು ತಪ್ಪದೇ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಅಂಧರು, ದೈಹಿಕ ಅಂಗವಿಕಲರು, ಗರ್ಭಿಣಿಯರಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!