ಕಾರ್ಯಕರ್ತರಲ್ಲಿ ಬದ್ದತೆಯಿದ್ದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ : ಅಶೋಕ್ ಕುಮಾರ್ ಕೊಡವೂರು
ಉಡುಪಿ (ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಹಲವು ಮುಖಂಡರು ಇಹಲೋಕ ತ್ಯಜಿಸಿದ್ದಾರೆ. ಅವರಷ್ಟೇ ಬದ್ದತೆ ಉಳ್ಳ ವ್ಯಕ್ತಿಗಳನ್ನು ಗುರುತಿಸುವುದು ಪಕ್ಷದ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ತೊಡಗಿಕೊಳ್ಳುವುದರಿಂದ ಪಕ್ಷ ಬೆಳೆಯುತ್ತಿದೆ. ಈ ಹಿನ್ನಲೆಯಿಂದ ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ಜಯಗಳಿಸಲು ಸಾಧ್ಯವಾಯಿತು. ಕಾಪು ಪುರಸಭಾ ಚುನಾವಣೆಯಲ್ಲಿ ಮತ ವಿಭಜನೆಯಿಂದ ಪಕ್ಷಕ್ಕೆ ಹಿನ್ನಡೆಯಾದರೂ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ತಡೆಗಟ್ಟುವ ಬಗ್ಗೆ ಕಾರ್ಯಯೋಜನೆ ಹಮ್ಮಿಕೊಳ್ಳಬೇಕಾಗಿದೆ. ಪಕ್ಷದ ಮೇಲೆ ಪ್ರತಿಯೊಬ್ಬರಿಗೂ ಬದ್ಧತೆ ಇರಬೇಕು. ಆಗ ಮಾತ್ರ ಪಕ್ಷ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ರಾಜ್ಯದ ಹಿತಾಸಕ್ತಿಗಾಗಿ ಕಾಂಗ್ರೆಸ್‌ನಿಂದ ಮೇಕೆದಾಟು ಪಾದಯಾತ್ರೆ ನಡೆಯಲಿದೆ. ಇದೇ ತಾರೀಕು 9 ರಿಂದ 19 ರ ವರೆಗೆ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳಬೇಕಾಗಿದೆ. ಕುಡಿಯುವ ನೀರಿನ ಹಕ್ಕಿಗೋಸ್ಕರ ನಡೆಯುವ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು. ಕೋಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಮನೆಯ ಪಕ್ಕವೇ ಕೊರಗ ಜನಾಂಗದ ಮೇಲೆ ಪೋಲಿಸ್ ದೌರ್ಜನ್ಯ ನಡೆದಿದೆ. ಸರಕಾರದ ವೈಫಲ್ಯವನ್ನು ಮರೆಮಾಚಲು ವಿವಿಧ ಕಟ್ಟುಕತೆಗಳನ್ನು ಕಟ್ಟಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಬೇಕು ಎಂದರು. ಕೋಟದ ದುರ್ಘಟನೆ ಬಗ್ಗೆ ಜಿಲ್ಲಾ ಕಾಂಗ್ರೆಸ್‌ನಿಂದ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಅಕಾಲಿಕ ನಿಧನ ಹೊಂದಿದ ಪಕ್ಷದ ಮುಖಂಡರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಜನಾರ್ದನ ಭಂಡಾರ್ಕಾರ್, ಶಂಭು ಪೂಜಾರಿಯವರಿಗೆ ಜಿಲ್ಲಾ ಕಾಂಗ್ರೆಸ್‌ನಿಂದ ನುಡಿನಮನ ಸಲ್ಲಿಸಲಾಯಿತು.
ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಧನ್ಯವಾದವಿತ್ತರು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನ್‌ಚಂದ್ರ ಸುವರ್ಣ, ಶಂಕರ್ ಕುಂದರ್, ಪ್ರದೀಪ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮದನ್ ಕುಮಾರ್, ದಿನಕರ ಹೇರೂರು, ರಮೇಶ್ ಕಾಂಚನ್, ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಕಿಶೋರ್ ಎರ್ಮಾಳ್, ಸೌರಭ್ ಬಲ್ಲಾಳ್, ಶಶಿಧರ ಶೆಟ್ಟಿ ಎಲ್ಲೂರು, ರೋಶನಿ ಒಲಿವರ್, ಇಸ್ಮಾಯಿಲ್ ಆತ್ರಾಡಿ, ರೋಶನ್ ಶೆಟ್ಟಿ, ಗಣೇಶ್ ಪೂಜಾರಿ ಕೆರ್ವಾಶೆ, ಕೆ.ಪಿ.ಸಿ.ಸಿ. ಸಂಯೋಜಕರುಗಳಾದ ವೆರೋನಿಕಾ ಕರ್ನೇಲಿಯೋ, ಮೊದಲಾದವರು ಉಪಸ್ಥಿತರಿದ್ದರು.