ಗಾಲ್ವಾನ್ನಲ್ಲಿ ಚೀನಾ ಧ್ವಜ,ಮೋದಿ ಜೀ ಮೌನ ಮುರಿಯಿರಿ: ರಾಹುಲ್ ಗಾಂಧಿ ವಾಗ್ದಾಳಿ
ಲಖನೌ, ಜ . 4 : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗಾಲ್ವಾನ್ ನಲ್ಲಿ ಚೀನಾದ ಧ್ವಜ ಕಂಡು ಬಂದಿರುವ ಕುರಿತು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಗಾಲ್ವಾನ್ನಲ್ಲಿ ನಮ್ಮ ತ್ರಿವರ್ಣ ಧ್ವಜ ಚೆನ್ನಾಗಿ ಕಾಣುತ್ತದೆ. ಈ ಬಗ್ಗೆ ಚೀನಾಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ. ಮೋದಿ ಜೀ ಮೌನ ಮುರಿಯಿರಿ” ಎಂದು ಬರೆದುಕೊಂಡಿದ್ದಾರೆ.
ಚೀನಾವು ಬಿಡುಗಡೆ ಮಾಡಿರುವ ಪ್ರಚಾರ ವಿಡಿಯೋದಲ್ಲಿ 2022ರ ಹೊಸ ವರ್ಷದ ದಿನದಂದು ಗಾಲ್ವಾನ್ನಲ್ಲಿ ಚೀನಾ ತನ್ನ ಬಾವುಟವನ್ನು ಹಾರಿಸುವ ದೃಶ್ಯ ಕಂಡುಬಂದಿದೆ.
ಈ ವಿಡಿಯೋವನ್ನು ಶೇನ್ ಶಿವಿಯ್ ಎನ್ನುವ ಚೀನಾ ಮಾಧ್ಯಮದ ವರದಿಗಾರ ಟ್ವೀಟ್ ಮಾಡಿದ್ದು, “ಚೀನಾದ ಬಾವುಟವನ್ನು ಚೀನಾದ ಅಧಿಕಾರಿಗಳು ಗಾಲ್ವಾನ್ನಲ್ಲಿ ಹಾರಿಸುವ ದೃಶ್ಯ ಕಂಡುಬಂದಿದೆ. 2022ರ ಹೊಸ ವರ್ಷದ ವೇಳೆ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಬಾವುಟವನ್ನು ಹಾರಿಸಲಾಗಿದೆ” ಎಂದಿದ್ದಾರೆ.