ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿದೆ : ನಯನ ಗಣೇಶ್
ಉಡುಪಿ(ಉಡುಪಿ ಟೈಮ್ಸ್ ವರದಿ): ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರ ಸಮ್ಮುಖದಲ್ಲೇ ಸಂಸದ ಡಿಕೆ ಸುರೇಶ್ ಅವರ ವರ್ತನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯೊಂದನ್ನು ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿದೆ. ಮುಖ್ಯಮಂತ್ರಿ ಮುಂದೆ ವೇದಿಕೆಯಲ್ಲಿ ಸಚಿವರಿಗೆ ಭಾಷಣ ಮಾಡಲು ಅವಕಾಶ ನೀಡದೆ ಏರು ಧ್ವನಿಯಲ್ಲಿ ತೀರ ಕೆಳ ಮಟ್ಟದ ರಾಜಕಾರಣವನ್ನು ಸಂಸದ ಡಿಕೆ ಸುರೇಶ್ ಮಾಡಿದ್ದಾರೆ. ರಾಜ್ಯದ ಜನ ಈ ಎಲ್ಲಾ ಘಟನೆಗಳನ್ನು ಗಮನಿಸಿದ್ದು ಇಂತಹ ಗೂಂಡಾ ವರ್ತನೆಗೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರ-ಮಾಗಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಸ್ಥಳೀಯರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಲ್ಲೇ ಗಲಾಟೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿಯ ಸಚಿವರ ನಡುವೆ ಜಟಾಪಟಿ ನಡೆದಿತ್ತು.