ಕುಂದಾಪುರ:ವಜ್ರಾಭರಣಗಳ ಪ್ರದರ್ಶನದ ವೇಳೆ ಕಳವು, ಇಬ್ಬರು ಆರೋಪಿಗಳ ಬಂಧನ

ಕುಂದಾಪುರ ಜ.4 (ಉಡುಪಿ ಟೈಮ್ಸ್ ವರದಿ) : ಕಳೆದ ನವೆಂಬರ್ ನಲ್ಲಿ ಕುಂದಾಪುರ ಕೋಟೇಶ್ವರದ ಯುವ ಮೆರಿಡಿಯನ್ ಹಾಲ್‌ನಲ್ಲಿ ನಡೆಯುತ್ತಿದ್ದ 3 ದಿನಗಳ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಧನ ರಾಜ್ ವಿಜಯ್ ಪರ್ ಮಾರ್ (42 ), ಅಜಯ್ ಸಿಂಗ್ ಕಿಶೋರ್ ಸಾಲುಂಕೆ (23) ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2021 ರ ನ.27 ರಿಂದ ನ.29 ರ ವರೆಗೆ ಕುಂದಾಪುರದ ಕೋಟೇಶ್ವರದ ಯುವ ಮೆರಿಡಿಯನ್ ಹಾಲ್‌ನಲ್ಲಿ ಓರಾ ಫೈನ್ ಜ್ಯುವೆಲರಿ ಸಂಸ್ಥೆಯ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗಿತ್ತು. ನ.29ರಂದು ಈ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಮತ್ತು ಓರ್ವ ವ್ಯಕ್ತಿ 2,86,000 ರೂ ಮೌಲ್ಯದ 2 ಜೊತೆ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರು ಮಹಾರಾಷ್ಟ್ರ ಪುಣೆಯಲ್ಲಿ ಡಿ.30 ರಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯಾಚರಣೆ ಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಇವರ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ ಕೆ ರವರ ಮತ್ತು ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ ಇವರ ನಿರ್ದೇಶನದಲ್ಲಿ, ಕುಂದಾಪುರ ಪೊಲೀಸ್ ಠಾಣಾ ಉಪನಿರೀಕ್ಷಕ ಸದಾಶಿವ ಆರ್ ಗವರೋಜಿ ಹಾಗೂ ತನಿಖಾ ಪಿಎಸ್‌ಐ ರಮೇಶ್ ಆರ್ ಪವಾರ್ ನೇತೃತ್ವದ ಪತ್ತೆದಳದ ತಂಡ ದೊಂದಿಗೆ. ಪ್ರೊಬೇಷನರಿ ಪಿಎಸ್‌ಐರವರುಗಳಾದ ಚಂದ್ರಕಲಾ ಪತ್ತಾರ, ಜಯಶ್ರೀ ಹುನ್ನೂರ, ಎ.ಎಸ್.ಐ ಸುಧಾಕರ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಶಿವಾನಂದ, ದಿನೇಶ, ನಿತಿನ್ ಮತ್ತು ಸಿಬ್ಬಂದಿಯವರಾದ ಸಂತೋಷ ಕುಮಾರ್ ಕೆಯು ಮತ್ತು ಸಚಿನ್ ಶೆಟ್ಟಿ, ರಾಮ ಪೂಜಾರಿ, ರವಿ ನಾಯ್ಕ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!