ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ: ಸಿದ್ದರಾಮಯ್ಯ
ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸುದ್ದಿಗಾರರ ಜೊತೆ ಗುರುವಾರ ಮತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜನರ ತೀರ್ಪು ಹೊರಬಿದ್ದಿದೆ. ಚುನಾವಣೆ ನಡೆದ 1,187 ಸ್ಥಾನಗಳ ಪೈಕಿ 500 ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಫಲಿತಾಂಶದಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ ಎಂಬುದು ಕಂಡುಬರುತ್ತದೆ. ಫಲಿತಾಂಶ ಖುಷಿ ಕೊಟ್ಟಿದೆ’ ಎಂದರು.
‘ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಮತ್ತು ಬಿಜೆಪಿ ಎರಡೂ ತಲಾ ಹನ್ನೊಂದು ಸ್ಥಾನಗಳನ್ನು ಗೆದ್ದಿದ್ದರೂ ಶೇಕಡಾವಾರು ಮತಗಳ ಪ್ರಮಾಣ ನಮಗೆ ಹೆಚ್ಚು ಬಂದಿದೆ. ನಮಗೆ ಶೇ 48 ಮತ ಬಂದಿದ್ದರೆ, ಬಿಜೆಪಿಗೆ ಶೇ 41 ಬಂದಿತ್ತು. ಇದೇ 27 ರಂದು 1,187 ಸ್ಥಾನಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ 500ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 430, ಜೆಡಿಎಸ್ 45, ಇತರೆ 207 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಫಲಿತಾಂಶದಿಂದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತದೆ’ ಎಂದರು.
‘ಪಕ್ಷ ಇಂದು ಪ್ರಬಲ ಸಂಘಟನೆಯಾಗಿ ಬೆಳೆಯುತ್ತಿದೆ. ಇದನ್ನು ನಾವು ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತೇವೆ. ಜೊತೆಗೆ ಕಾಂಗ್ರೆಸ್ ಪಕ್ಷ ನಮಗೆ ಬೇಕು ಎಂದು ಜನರೇ ಬಯಸುತ್ತಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ನೂರಕ್ಕೆ ನೂರು ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದರು.
‘ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ನಾನು ಯಾವಾಗಲೂ ಮುಂದಿನ ಚುನಾವಣೆಗಳ ದಿಕ್ಸೂಚಿ ಎಂದು ಹೇಳಲ್ಲ. ಆದರೆ, ಇದರಿಂದ ಜನರ ಒಲವು ಯಾರ ಕಡೆಗಿದೆ ಎಂದು ತಿಳಿಯುತ್ತದೆ ಎಂಬುದು ನನ್ನ ಅಭಿಪ್ರಾಯ. ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಜನರ ನಿರೀಕ್ಷೆ ಹುಸಿಯಾಗಿದೆ’ ಎಂದರು.
‘ಹಿಂದೂ ದೇವಾಲಯಗಳನ್ನು ಸರ್ಕಾರ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ನಮ್ಮ ತಕರಾರು ಖಂಡಿತಾ ಇಲ್ಲ. ಸಾರಾಸಗಟಾಗಿ ಎಲ್ಲಾ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕು. ಕಾರಣ ರಾಜ್ಯದ ಸಾಕಷ್ಟು ದೇವಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ, ಅವುಗಳನ್ನು ಸ್ವತಂತ್ರಗೊಳಿಸಿದರೆ ದೇವಾಲಯ ನಡೆಸಿಕೊಂಡು ಹೋಗುವುದು ಕಷ್ಟವಾಗಿ ಉಪಕಾರಕ್ಕಿಂತ
ತೊಂದರೆಯೇ ಹೆಚ್ಚಾಗುತ್ತದೆ’ ಎಂದರು.
‘ಜನರನ್ನು ಭಾವನಾತ್ಮಕವಾಗಿ ಹಾದಿ ತಪ್ಪಿಸಲು ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಜನರು ಬುದ್ದಿವಂತರಿದ್ದಾರೆ. ತಾವೇನು ತೀರ್ಮಾನ ಮಾಡಬೇಕು ಅದನ್ನೇ ಜನ ಮಾಡುತ್ತಾರೆ’ ಎಂದೂ ಹೇಳಿದರು.