ಉಡುಪಿ: ಮಾಸ್ಕ್ ಧರಿಸದೇ ವ್ಯಾಪಾರ ನಡೆಸುವ ಅಂಗಡಿಯ ಪರವಾನಿಗೆ ತಾತ್ಕಾಲಿಕ ರದ್ದು: ಜಿಲ್ಲಾಧಿಕಾರಿ
ಉಡುಪಿ (ಉಡುಪಿ ಟೈಮ್ಸ್ ವರದಿ): ಮಾಸ್ಕ್ ಧರಿಸದೇ ಇರುವ ಅಂಗಡಿಯವರ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ಧು ಮಾಡುವಂತೆ ಸೂಚಿಸಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವ ಅಂಗಡಿಯವರು ಮಾಸ್ಕ್ ಹಾಕಿಕೊಳ್ಳುವುದಿಲ್ಲವೋ ಅಂತಹ ಅಂಗಡಿಗಳ ಪರವಾಣಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದ್ರೆ ನಗರದಲ್ಲಿ ಅಂಗಡಿಗಳಲ್ಲಿ ಹಲವೆಡೆ ಮಾಸ್ಕ್ ಹಾಕದೇ ಇರುವುದು ಕಂಡು ಬಂದರೂ ಇದುವರೆಗೆ ಯಾವುದೇ ಅಂಗಡಿಗಳ ಪರವಾನಿಗೆ ತಾತ್ಕಾಲಿಕವಾಗಿ ರದ್ಧುಗೊಳಿಸುವಂತೆ ಆದೇಶ ನೀಡಿದರು ಇನ್ನೂ ಯಾವುದೇ ಅಂಗಡಿಗಳ ಲೈಸೆನ್ಸ್ ರದ್ದಾಗಿರುವುದು ಕಂಡು ಬಂದಿಲ್ಲ.
ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳದ ಎಲ್ಲಾ ಮುನ್ಸಿಪಾಲಿಟಿ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಲಾಗಿದೆ ಎಂದರು. ಕೊರೋನಾ ಕುರಿತು ಹೆಚ್ಚಿನ ಮುಂಜಾಗೃತೆ ವಹಿಸಿಕೊಳ್ಳಬೇಕಾದ ಇಂತಹ ಸಂದರ್ಭದಲ್ಲಿ ನಮ್ಮಿಂದಲೇ ನಿರ್ಲಕ್ಷ್ಯವಹಿಸಿದರೆ ಮತ್ತೆ ಜನರನ್ನು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ. ನಮ್ಮ ನಿರ್ಲಕ್ಷದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಬಾರದು ಎಂದು ಎಲ್ಲಾ ಅಧಿಕಾರಿಗಳಿ ಸೂಚನೆ ನೀಡಲಾಗಿದೆ. ಕೇಂದ್ರದ ಕೋವಿಡ್ ನಿಯಮಾವಳಿಗಳನ್ನು ಎಲ್ಲರೂ ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಾಲ್ಕು ಇಲಾಖೆ ಸೇರಿ ಸಕಾಲ ಸಪ್ತಾಹವನ್ನು ನಡೆಸುತ್ತಿದ್ದು, ರಾಜ್ಯದಲ್ಲಿ ಸಕಾಲದ ಉತ್ತಮ ಸೇವೆಯನ್ನು ನೀಡುವ ಜಿಲ್ಲೆಗಳ ಪೈಕಿ ಟಾಪ್ 5 ಜಿಲ್ಲೆಯಲ್ಲಿ ಉಡುಪಿ ಇದ್ದು ಈ ವಾರದೊಳಗೆ ಸಕಾಲಕ್ಕೆ ಬಂದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅದಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಥಮ ಹಾಗು ದ್ವಿತೀಯ ವರ್ಷದ ಕಾಲೇಜು ಆರಂಭಿಸದಂತೆ ಸೂಚನೆ: ಜಿಲ್ಲೆಯಲ್ಲಿ ಕಾಲೇಜು ಆರಂಭವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಎಲ್ಲಾ ಕಾಲೇಜಿನ ಪ್ರಾಂಶುಪಾಲರನ್ನು ಕರೆದು ಸಭೆ ನಡೆಸಡೆಸಿದ್ದು, ಅವರಿಗೆ ಕೋವಿಡ್ ನಿಯಮಾವಳಿಗಳನ್ನು ಯಾವ ರೀತಿ ಪಾಲನೆ ಮಾಡಬೇಕು ಎಂಬ ಕುರಿತು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕೂ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳನ್ನು ಆರಂಭಿಸದಂತೆ ಸೂಚನೆ ನೀಡಲಾಗಿದೆ. ಆದರೆ ಅಗತ್ಯ ವಿದ್ದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ವಾರಕ್ಕೊಮ್ಮೆ ಕಾಂಟ್ಯಾಕ್ಟ್ ಕ್ಲಾಸ್ ನಡೆಸಿ ಪಠ್ಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು.
ಇದರ ಜೊತೆಗೆ ಕೋವಿಡ್ ನಿಯಮಾವಳಿಗಳನ್ನು ಅಳವಡಿಸಿಕೊಂಡು ಅಂತಿಮ ವರ್ಷದ ತರಗತಿಗಳನ್ನು ನಡೆಸಬೇಕು. ಹಾಗೂ ಆರೋಗ್ಯ ಅಧಿಕಾರಿಗಳು, ತಹಶಿಲ್ದಾರ್ ಸೇರಿ ಇತರ ಅಧಿಕಾರಿಗಳು ವಾರದಲ್ಲಿ 2 ಬಾರಿ ತರಗತಿಗಳಿಗೆ ಭೇಟಿ ಮಾಡಿ ಕಾಲೇಜಿನಲ್ಲಿ ಕೋವಿಡ್ ನಿಯಮಾವಳಿಗಳು ಪಾಲನೆ ಆಗುತ್ತಿದಯೇ, ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.
ಈ ವೇಳೆ ಜಿಲ್ಲೆಯಲ್ಲಿ ನಡೆಯುವ ಸಮಾರಂಭಗಳಲ್ಲಿ ನಿಗಾ ವಹಿಸಲು ಅಧಿಕಾರಿಗಳನ್ನು ನೇಮಿಸುವ ಕುರಿತಂತೆ ಪತ್ರಕರ್ತರೋರ್ವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು, ಜಿಲ್ಲಾಡಳಿತ ಅನುಮತಿ ಪಡೆದು ನಡೆಯುವ ಮದುವೆ ಕಾರ್ಯಕ್ರಮಗಳಿಗೆ ಅಧಿಕಾರಿಗಳನ್ನು ನೇಮಿಸಿ ನಿಗಾ ವಹಿಸುವಂತೆ ಮಾಡಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.