ಮೈಸೂರು:ಶಿಕ್ಷಕಿ ನಾಗರತ್ನ ಜಿ ಯವರಿಗೆ ಗುರು ಭೂಷಣ ಪ್ರಶಸ್ತಿ
ಮೈಸೂರು(ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಉಡುಪಿ ಜಿಲ್ಲೆಯ ಕೋಟದ ಶಿಕ್ಷಕಿ, ರಂಗಕಲಾವಿದೆ, ನಿರೂಪಕಿ ನಾಗರತ್ನ ಜಿ. ಯವರಿಗೆ ಗುರು ಭೂಷಣ ಪ್ರಶಸ್ತಿ ದೊರೆತಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಜನ ಕರೋನ ವಾರಿಯರ್ಸ್ ಗೆ ಜನಸೇವಾ ಪ್ರಶಸ್ತಿ ಹಾಗೂ 20 ಜನ ಶಿಕ್ಷಕರಿಗೆ ರಾಜ್ಯ ಮಟ್ಟದ ಗುರುಭೂಷಣ ಪ್ರಶಸ್ತಿ ಮತ್ತು ಫೀನಿಕ್ಸ್ ಬುಕ್ ಹೌಸ್ ಮೈಸೂರು ಇದರ ವತಿಯಿಂದ 35 ಜನ ಶಿಕ್ಷಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.
ನಾಗರತ್ನರವರು ಬೈಂದೂರು ವಲಯದ ಆಲೂರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಕಲಾ ಕ್ಷೇತ್ರದಲ್ಲಿನ ಸೃಜನಶೀಲತೆಯನ್ನು ಗುರುತಿಸಿ, ಕರ್ನಾಟಕ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ರಾಜ್ಯ ಮಟ್ಟದ ಗುರುಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಹಿಂದೆ ಇವರ ಸಾದನೆಗಳನ್ನು ಗುರುತಿಸಿ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಕಾರ್ಯಕ್ರಮವನ್ನು ಸುಪ್ರಸಿದ್ಧ ವಾಗ್ಮಿ ಹಾಗೂ ಚಿಂತಕ ಕೃಷ್ಣೇಗೌಡ ಅವರು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಹಗಲಿರುಳೆನ್ನದೆ ಜನರ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದ 25 ಜನ ಕೊರೋನ ವಾರಿಯರ್ಸ್ ಗೆ ಜನ ಸೇವಾ ಪ್ರಶಸ್ತಿ ಹಾಗೂ ರಾಜ್ಯದ ವಿವಿಧ ಭಾಗದ ಶಿಕ್ಷಕರ ಗಣನೀಯ ಸೇವೆಯನ್ನು ಗುರುತಿಸಿ, 25 ಜನ ಶಿಕ್ಷಕರಿಗೆ ರಾಜ್ಯಮಟ್ಟದ ಗುರು ಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರ.
ಇಂತಹ ಉತ್ತಮ ಕಾರ್ಯ ಮಾಡಿದ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಸಂಸ್ಥೆ ಹಾಗೂ ಇದರ ಜೊತೆಗೆ ಫೀನಿಕ್ಸ್ ಬುಕ್ ಹೌಸ್ ಮೈಸೂರು ಸಂಸ್ಥೆಯೂ ಕೂಡ ಕೈಜೋಡಿಸಿ 35 ಜನ ಶಿಕ್ಷಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮೈಸೂರು ವಿಧಾನ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ, ಬೆಂಗಳೂರು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ನಾಡೋಜ ಮಹೇಶ್ ಜೋಶಿ, ಚಲನಚಿತ್ರ ನಟ ಮತ್ತು ನಿರ್ದೇಶಕರಾದ ಸಾಯಿಪ್ರಕಾಶ್ ಜೊತೆಗೂಡಿ ಪ್ರಶಸ್ತಿ ಪ್ರಧಾನ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕರಾದ ಜಿ ಟಿ ದೇವೇಗೌಡರು ವಹಿಸಿದ್ದರು. ಅರ್ಕ ಧಾಮದ ಶ್ರೀ ಅರ್ಕ ಶ್ರೀನಿವಾಸ ಗುರೂಜಿ ಹಾಗೂ ಗವಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಉಪಸ್ಥಿಯಿತರಿದ್ದರು.