ಐಕ್ಯತೆ ಮತ್ತು ಸಾಮರಸ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ಅಮ್ಮಣ್ಣಾಯ
ಕಾಪು (ಉಡುಪಿ ಟೈಮ್ಸ್ ವರದಿ): ಪರಸ್ಪರ ಸಾಮರಸ್ಯ, ಸೌಹಾರ್ದತೆಯನ್ನು ಬೆಳೆಸಿಕೊಳ್ಳುವಲ್ಲಿ ದೀಪಾವಳಿ ಹಬ್ಬ ಪೂರಕವಾಗಿದೆ. ಪ್ರತಿಯೊಬ್ಬರಲ್ಲಿ ಸಮನ್ವಯತೆಯಿದ್ದು, ಅದನ್ನು ಕಾಪಾಡಿ ಬೆಳೆಸಿಕೊಳ್ಳುವಲ್ಲಿ ದೀಪಾರಾದನೆ ಪ್ರಮುಖವಾಗಿದೆ. ಉರಿಸಿದ ದೀಪವನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆಯಾಗಿದೆ. ಆ ಮೂಲಕ ದೇಶದ ಐಕ್ಯತೆ ಮತ್ತು ಸಾಮರಸ್ಯ ಕಾಪಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಕಾಪು ಪ್ರೆಸ್ ಕ್ಲಬ್ ಆವರಣದಲ್ಲಿ ಮಂಗಳವಾರ ಆಯೋಜಿಸಲಾದ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅವರು ಮಾತನಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ಅತಿ ಹೆಚ್ಚಿನ ಒತ್ತಡ ಇದೆ. ವಸ್ತು ನಿಷ್ಟ ವರದಿಯನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಹೆಚ್ಚಿನ ಒತ್ತು ನೀಡಬೇಕಿದ್ದು, ಕಾಪು ತಾಲೂಕು ಪತ್ರಕರ್ತರಲ್ಲಿ ಇರುವ ಒಗ್ಗಟ್ಟು ಎಲ್ಲರಿಗೂ ಮಾದರಿಯಾಗಿದೆ. ಸಂಘದ ವತಿಯಿಂದ ಸರ್ವಧರ್ಮಗಳ ಹಬ್ಬ ಆಚರಿಸಲ್ಪಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಲೀಲಾಧರ ಶೆಟ್ಟಿ ಕರಂದಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕಂದಾಯ ನಿರೀಕ್ಷಕ ಸುರೇಶ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು ಶುಭ ಹಾರೈಸಿದರು.ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುರುಚರಣ್ ಪೊಲಿಪು ಹಾಗೂ ಮಹಮ್ಮದ್ ಫಾರೂಕ್ ಚಂದ್ರನಗರ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ಅನ್ವರ್ ಆಲಿ ಕಾಪು, ಹರೀಶ್ ನಾಯಕ್ ಕಾಪು, ದಿವಾಕರ ಡಿ. ಶೆಟ್ಟಿ ಕಳತ್ತೂರು, ದಿವಾಕರ ಬಿ. ಶೆಟ್ಟಿ, ಸದಾಶಿವ ಶೇರ್ವೆಗಾರ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಶಫೀ ಉಚ್ಚಿಲ ಉಪಸ್ಥಿತರಿದ್ದರು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಕೇಶ್ ಕುಂಜೂರು ಸ್ವಾಗತಿಸಿದರು. ಕೋಶಾಧಿಕಾರಿ ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಹೆಜಮಾಡಿ ವಂದಿಸಿದರು.