ಬೈಂದೂರು: ಅಕ್ಕಿ ಅಕ್ರಮ ದಾಸ್ತಾನು ಅಧಿಕಾರಿಗಳಿಂದ ದಾಳಿ
ಬೈಂದೂರು ನ.3 (ಉಡುಪಿ ಟೈಮ್ಸ್ ವರದಿ) : ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬೈಂದೂರಿನ ಆಹಾರ ನಿರೀಕ್ಷರು 1000 ಕಿಲೋ ಅಕ್ಕಿಯನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರಿನ ಆಹಾರ ನಿರೀಕ್ಷಕ ವಿನಯ ಕುಮಾರ್ ಅವರು ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಫಿಶರಿಶ್ ಕಾಲೋನಿಯಲ್ಲಿ ಅಕ್ರಮ ಅಕ್ಕಿ ದಾಸ್ತಾನು ಮಾಡಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ, ಸ್ಥಳದಲ್ಲಿ ಒಂದು ವಾಹನದಲ್ಲಿ ಅಕ್ಕಿ ಚೀಲವನ್ನು ಲೋಡ್ ಮಾಡಿ ಇಟ್ಟಿರುವುದು ಕಂಡು ಬಂದಿದೆ. ಬಳಿಕ ಬೈಂದೂರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ವಾಹನದಲ್ಲಿ ಲೋಡ್ ಮಾಡಿದ್ದ, 31 ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಟ್ಟು 1000 ಕಿ.ಲೋ ಅಕ್ಕಿ, ತೂಕದ ಯಂತ್ರ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.