ಕಾರು ತಡೆದು ವ್ಯಕ್ತಿಗೆ ಹಲ್ಲೆ: ದೂರು ದಾಖಲು
ಬೈಂದೂರು ನ.3(ಉಡುಪಿ ಟೈಮ್ಸ್ ವರದಿ) :ಶಂಕರನಾರಾಯಣದಲ್ಲಿ ಕಾಡು ಕೋಣ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನು ಪಡೆದುಕೊಂಡಿದ್ದ ಆರೋಪಿ ತಾನು ಜೈಲಿಗೆ ಹೋಗಲು ಕಾರಣರಾದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೈಂದೂರಿನ ಒತ್ತಿನಣೆ ಏರಿನಲ್ಲಿ ನಡೆದಿದೆ. ಗವಂಜಿ ಶಾಯಿದ್ ಹಲ್ಲೆ ನಡೆಸಿದ ಆರೋಪಿ.
ಈ ಬಗ್ಗೆ ಹಲ್ಲೆಗೊಳಗಾದ ಬೈಂದೂರಿನ ಗುಲ್ವಾಡಿಯ ಅಬುಬಕ್ಕರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನ.1 ರಂದು ಅಬುಬಕ್ಕರ್ ರವರು ಅವರ ಗೆಳೆಯನೊಂದಿಗೆ ಕಾರಿನಲ್ಲಿ ಬೈಂದೂರಿನಿಂದ ಭಟ್ಕಳ ಕಡೆ ಹೋಗುತ್ತಿದ್ದರು.
ಈ ವೇಳೆ ಶಂಕರ ನಾರಾಯಣದಲ್ಲಿ ಕಾಡು ಕೋಣ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನು ಪಡೆದುಕೊಂಡಿದ್ದ ಆರೋಪಿ ಗವಂಜಿ ಶಾಯಿದ್ ಎಂಬಾತ ಜಾಮೀನಿನಿಂದ ಬಂದ ಬಳಿಕ ತಾನು ಜೈಲಿಗೆ ಹೋಗಲು ಅಬುಬಕ್ಕರ್ ರವರೇ ಕಾರಣವೆಂದು ತಿಳಿದು ಬೈಂದೂರಿನ ಒತ್ತಿನಣೆ ಏರಿನಲ್ಲಿ ಅಬುಬಕ್ಕರ್ ಅವರ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.