ಕುಂದಾಪುರ: ಅಂಬೇಡ್ಕರ್ ಕಾಲೋನಿಗೆ ಸಚಿವ ಕೋಟ ಭೇಟಿ : ಪರಿಶೀಲನೆ

ಕುಂದಾಪುರ ನ.2 (ಉಡುಪಿ ಟೈಮ್ಸ್ ವರದಿ): ನಗರದ ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಪ.ಪಂ ಮತ್ತು ಪೌರ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ಮನೆಗಳು ಅರೆ ಬರೆಯಾಗಿದೆ ಎಂಬ ದೂರಿನ ಅನ್ವಯ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಈ ಕುರಿತಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ವಸತಿ ನಿಗಮದಿಂದ ಒಟ್ಟು 13 ಮನೆಗಳು ನಿರ್ಮಾಣವಾಗುತ್ತಿದ್ದು, 9 ಮನೆಗಳು ಅರೆ ಬರೆಯಾಗಿದೆ. ಪೂರ್ಣಗೊಂಡ ಮನೆ ನಿರ್ಮಾಣದ ಕೊನೆಯ ಕಂತು ಮಾತ್ರ ಬರಬೇಕಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ವಸತಿ ಇಲಾಖೆಯೊಂದಿಗೆ ಮಾತನಾಡಿದ್ದು, 15 ದಿನಗಳಲ್ಲಿ ಖಾತೆಗೆ ಹಣ ವರ್ಗಾಯಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ನಿಯಮದನ್ವಯ ಫಲಾನುಭವಿಗಳೇ ಮನೆ ನಿರ್ಮಾಣ ಮಾಡಬೇಕು. ಹೊರಗುತ್ತಿಗೆಗೆ ಅವಕಾಶ ಇಲ್ಲ. ಹೊರಗುತ್ತಿಗೆ ಕೊಟ್ಟರೂ ಗುಣಮಟ್ಟದ ಕೆಲಸ ಮಾಡಲಾಗುತ್ತದೆ ಎಂಬ ನಂಬಿಕೆ ಫಲಾನುಭವಿಗಳಲ್ಲಿ ಇರುವುದಿಲ್ಲ. ಆ ಕಾರಣಕ್ಕಾಗಿ ಮೂರೂವರೆ ಲಕ್ಷದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಲವೆಡೆ ಗೋಡೆ, ಅಡಿಪಾಯ ಹಾಕಿದಾಗ ಅದಕ್ಕೆ ಪಾವತಿ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಫಲಾನುಭವಿಗಳ ಬಳಿ ಹಣದ ಶಕ್ತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳನ್ನು ತೆಗೆದುಕೊಳ್ಳಲು ಹೇಳಲಾಗಿದೆ. 6 ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು. ಹಾಗೂ 6 ಕುಟುಂಬದವರಿಗೆ ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಗಮನಕ್ಕೆ ಬಂದಿದೆ. ಅದರ ಪ್ರತಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ ಅವರು, ಚರಂಡಿಯನ್ನು ಅಗಲಗೊಳಿಸಿ, ರಿಂಗ್ ರೋಡ್ ಮಾದರಿಯಲ್ಲಿ ರಸ್ತೆಯನ್ನು ನಿರ್ಮಿಸಿ ಎಂದು ಮನವಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆ ಸದಸ್ಯ ಪ್ರಭಾಕರ್ ವಿ, ಬಿಜೆಪಿ ಮುಖಂಡ ರಾಜೇಶ್ ಕಾವೇರಿ, ಜಿ.ಪ್ರ. ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಪುರಸಭೆ ನಾಮನಿರ್ದೇಶಿತ ಸದಸ್ಯ ರತ್ನಾಕರ್ , ಕರಣ್, ಮಹೇಶ್, ಸ್ಥಳೀಯರಾದ ನಾಗರಾಜ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!