ಪುತ್ತೂರಿನಲ್ಲಿ ರಸ್ತೆ ಅಪಘಾತ ಬೈಕ್ ಸವಾರ ಸಾವು
ಪುತ್ತೂರು(ಉಡುಪಿ ಟೈಮ್ಸ್ ವರದಿ): ಬೈಕ್ ಮತ್ತು ಜೀಪ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಬೈಪಾಸ್ ತೆಂಕಿಲ ಎಂಬಲ್ಲಿ ನಡೆದಿದೆ.
ಪರ್ಲಡ್ಕ ನಿವಾಸಿ ಹಂಝ ಹಾಜಿ ಎಂಬವರ ಪುತ್ರ ಮುಹಮ್ಮದ್ ಹಾಶಿಂ(20) ಮೃತಪಟ್ಟ ಯುವಕ. ಹಾಶಿಂ ಚಲಾಯಿಸುತ್ತಿದ್ದ ಬೈಕ್ ಮತ್ತು ಜೀಪ್ ನಡುವೆ ಢಿಕ್ಕಿ ಸಂಭವಿಸಿದ್ದು, ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಹಾಶಿಂ ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.