ಕಲೆಯಲ್ಲಿ ತೊಡಗಿಕೊಳ್ಳುವ ಮೂಲಕ ಕಲಾವಿದ ಪರಮಾತ್ಮನೊಂದಿಗೆ ಅನುಸಂಧಾನ : ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ
ಉಡುಪಿ (ಉಡುಪಿ ಟೈಮ್ಸ್ ವರದಿ): ಕಲೆಯಲ್ಲಿ ತೊಡಗಿಕೊಳ್ಳುವ ಮೂಲಕ ಮೂಲಕ ಕಲಾವಿದ ಪರಮಾತ್ಮನೊಂದಿಗೆ ಅನುಸಂಧಾನ ಸಾಧಿಸುತ್ತಾನೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಶ್ರೀ ಅದಮಾರುಮಠ, ಕೃಷ್ಣ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ, ಕರ್ನಾಟಕ ಜಾನಪದ ಪರಿಷತ್ತು (ರಿ) ಉಡುಪಿ ಜಿಲ್ಲಾ ಘಟಕ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ) ಉಡುಪಿ ಇವರ ಸಹಯೋಗದಲ್ಲಿ ಧಾರೇಶ್ವರ ಯಕ್ಷ ಬಳಗ ಚಾರಿಟೆಬಲ್ ಟ್ರಸ್ಟ್ (ರಿ) ಕಿರಿಮಂಜೇಶ್ವರ ಸಾದರಪಡಿಸಿದ ಆರನೇ ವರ್ಷದ ಯಕ್ಷ ಅಷ್ಟಾಹದ ಸಮಾರೋಪ ಸಮಾರಂಭದಲ್ಲಿ ಆಶೀರ್ವದಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತು (ರಿ) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ, ಧಾರೇಶ್ವರರಂತಹ ನಿಸ್ವಾರ್ಥಿ ಕಲಾವಿದರಿಂದ ಕಲೆ ಉಳಿದು ಬೆಳೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರದೀಪ ಕುಮಾರ್ ಕಲ್ಕೂರ, ಜನಾರ್ದನ ಹಂದೆ ಮತ್ತು ಬಾಲಗಂಗಾಧರ ರಾವ್ ಶುಭಾಶಂಸನೆಗೈದರು. ಉದ್ಯಮಿ ಗೋಪಾಲ ಬಂಗೇರರು ಉಪಸ್ಥಿತರಿದ್ದರು. ಸಂಘಟಕರಾದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಈ ಕಾರ್ಯಕ್ರಮದ ಉದ್ದೇಶ ಪೌರಾಣಿಕ ಕಥೆಯ ಹೊಸ ಪ್ರಸಂಗಗಳನ್ನು ಪರಿಚಯಿಸುವುದೆಂದರಲ್ಲದೆ, ಅಷ್ಟಾಹದ ಸಂಘಟನೆಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.