ಡ್ರಗ್ಸ್ ಮಾಫಿಯಾದ ನಂಟಿನಿಂದ ಕಾಂಗ್ರೆಸ್ ಆಡಳಿತ ನಡೆಸಿತ್ತು: ನಳಿನ್ ಆರೋಪ
ಉಡುಪಿ: ಕಳೆದ ಬಾರಿ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಅವರು ಜಿಲ್ಲಾ ಬಿಜೆಪಿವತಿಯಿಂದ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಗ್ರಾಮ ಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮ್ಯ ಸರಕಾರದ ಅವಧಿಯಲ್ಲಿ ಅನೇಕ ಸಂಘ ಪರಿವಾರದ ಕಾರ್ಯಕರ್ತರ ಹಾಗೂ ಮುಖಂಡರ ಹತ್ಯೆಗಳು ನಡೆದಿತ್ತು, ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೂವರೆ ವರ್ಷದ ಅವಧಿಯಲ್ಲಿ ಯಾವುದೇ ರೀತಿಯ ಮತೀಯ ಗಲಭೆಯಾಗಲಿ ಹತ್ಯೆಯಾಗಲಿ ನಡೆದಿಲ್ಲ ಎಂದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಆದರೆ ಗ್ರಾಮಗಳಲ್ಲಿ ಕೆಲವೊಂದು ಸಣ್ಣ ಸಣ್ಣ ನಾಯಕರ ಅಸ್ಥಿತ್ವಕ್ಕಾಗಿ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಧಿಕಾರಿಗಳನ್ನು ಭದ್ರಪಡಿಸಿಕೊಳ್ಳಲಾಗಿದೆ. ಆದ್ದರಿಂದ ಕಾಂಗ್ರೆಸ್ ಮುಕ್ತ ದೇಶವಾಗ ಬೇಕಾದರೆ ಮೊದಲು ಕಾಂಗ್ರೆಸ್ ಮುಕ್ತ ಗ್ರಾಮವಾಗಬೇಕು.
ಗಾಂಧಿ ಕನಸು ಕಂಡ ರಾಮ ರಾಜ್ಯವಾಗಬೇಕಾದರೆ ಮೊದಲು ಗ್ರಾಮಗಳ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಗಳನ್ನು ಶಸಕ್ತಗೊಳಿಸಲಾಗುತ್ತದೆ. ಈ ಭಾರಿಯ ರಾಜ್ಯದ 31 ಜಿಲ್ಲೆಗಳ 5805 ಗ್ರಾಮ ಪಂಚಾಯತ್‌ಗಳಲ್ಲಿ ಚುನಾವಣೆಗಳು ನಡೆಯಲಿದ್ದು, 96 ಸಾವಿರ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಪೈಕಿ 80 ಶೇ. ಗೆಲುವಿನ ಗುರಿಯನ್ನು ಹೊಂದಲಾಗಿದ್ದು, ಗ್ರಾಮಗಳಲ್ಲಿಯೂ ಕಾಂಗ್ರೆಸ್ ಮುಕ್ತ ಸರಕಾರ ಆಡಳಿತ ನಡೆಸುವ ಪಣತೊಟ್ಟಿದ್ದೇವೆ ಎಂದರು.
ಈ ವೇಳೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ನಮ್ಮ ಕಾರ್ಯಕರ್ತರು ನಮ್ಮವರೆ ಹಾಗೂ ಬರುವವರು ನಮ್ಮವರೇ ಎಂದು ಹೇಳುವ ಮೂಲಕ ಇತರ ಪಕ್ಷದಲ್ಲಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಗೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ಬಿಜೆಪಿಗೆ ಬರುವಂತೆ ಮನವೊಲಿಸಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂದ ಅವರು, ಬಿಜೆಪಿ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲಿಚ್ಚಿಸುವವರಿಗೆ ಪಕ್ಷ ಸದಾ ಸ್ವಾಗತ ಬಯಸುತ್ತದೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಇದೇ ವೇಳೆ ಲವ್ ಜಿಹಾದ್ ಕುರಿತು ಮಾತನಾಡಿದ ಅವರು ಲವ್ ಜಿಹಾದ್ ಕಡಿವಾಣಕ್ಕೆ ಕಠಿಣ ಕಾನೂನು ತರಲಾಗುತ್ತದೆ ಎಂದರು
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ, ಕೋಲಾರ ಸಂಸದ ಮುನಿಸ್ವಾಮಿ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆ0ಗಿನಕಾಯಿ, ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ಬಿಜೆಪಿ ಪ್ರಭಾರಿ ಮೂಡಬಿದಿರೆ ಶಾಸಕ ಉಮನಾಥ್ ಕೋಟ್ಯಾನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.