ಕಾರ್ಕಳ: ತೋಟದಲ್ಲಿ ನಿಧಿ ಇರುವುದಾಗಿ ನಂಬಿಸಿ ವಂಚನೆ
ಕಾರ್ಕಳ ಅ.31(ಉಡುಪಿ ಟೈಮ್ಸ್ ವರದಿ) : ಮನೆಯ ತೋಟದಲ್ಲಿ ನಿಧಿ ಇರುವುದಾಗಿ ನಂಬಿಸಿ ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಈ ಬಗ್ಗೆ ಗಗನ ಎಂಬವರು ಪೊಲೀಸರಿಗೆ ನೀಡಿದ ದೂರಿನಂತೆ ಗಗನ ಅವರ ತಂದೆ 5 ವರ್ಷಗಳಿಂದ ಪಾಶ್ರ್ವವಾಯು ಪೀಡಿತರಾಗಿ ಮನೆಯಲ್ಲಿಯೇ ಇರುತ್ತಿದ್ದರು. ಈ ನಡುವೆ ಅ.10 ರಂದು ಮನೆಗೆ ಬಂದ ಓಬಯ್ಯ ಮತ್ತು ಅಜೇಯ ಎಂಬವರು ಮನೆಯಲ್ಲಿ ಯಾರಾದರೂ ಪಾಶ್ರ್ವವಾಯು ಪೀಡಿತರು ಇದ್ದಾರೆಯೆ ಎಂದು ವಿಚಾರಿಸಿ ಪಾಶ್ರ್ವವಾಯು ಇದ್ದವರಿಗೆ ಮದ್ದು ಕೊಡುತ್ತೇವೆಂದೂ, ಕಾಯಿಲೆಯನ್ನು ಶೀಘ್ರ ಗುಣಪಡಿಸುತ್ತೇವೆಂದು ನಂಬಿಸಿದ್ದಾರೆ. ಅಲ್ಲದೆ ತಾವು ತಂದಿದ್ದ ಎಣ್ಣೆಯ ಬಾಟಲಿಯನ್ನು ನೀಡಿ ದಿನಕ್ಕೆ 2 ಬಾರಿ ಹಚ್ಚಲು ತಿಳಿಸಿ 25000 ರೂ. ಹಣವನ್ನು ಪಡೆದಿದ್ದಾರೆ. ಬಳಿಕ ತೋಟದಲ್ಲಿ ಸುತ್ತಾಡಿ ಈಜುಕೊಳದ ಬಳಿ ನಿಧಿ ಇರುವುದಾಗಿ ಹೇಳಿ ನಿಧಿಯನ್ನು ತೆಗೆಯಲು ಪೂಜೆ ಮಾಡಬೇಕಾಗುತ್ತದೆ ಅದಕ್ಕಾಗಿ 50,000 ರೂ. ಹಣ ಖರ್ಚಾಗುತ್ತದೆ ಎಂದು ತಿಳಿಸಿ ಹೋಗಿದ್ದಾರೆ.
ನಂತರ ಅ.18 ರಂದು ಗಗನ ಅವರ ತಂದೆಗೆ ಕರೆ ಮಾಡಿ ಅ.20 ರಂದು ಮನೆಗೆ ಬರುವುದಾಗಿ ಹಾಗೂ 50,000 ರೂ. ಹಣವನ್ನು ಕೊಡಬೇಕೆಂದು ತಿಳಿಸಿದ್ದಾರೆ. ಬಳಿಕ ತಿಳಿಸಿದ ದಿನಾಂಕದಂದು ಮನೆಗೆ ಬಂದ ಆರೋಪಿಗಳು ಈಜುಕೊಳದ ಹತ್ತಿರ ದೊಡ್ಡ ಹೊಂಡವೊಂದನ್ನು ತೋಡಿ ಯಾರೂ ಅಲ್ಲಿಗೆ ಹೋಗಬೇಡಿ ಎಂದು 70,000 ಖರ್ಚು ಆಗುತ್ತದೆ ಎಂದು ತಿಳಿಸಿ ಹಣ ಪಡೆದುಕೊಂಡು ಮತ್ತೆ ವಾರ ಬಿಟ್ಟು ಬರುವುದಾಗಿ ತಿಳಿಸಿ ಹೋಗಿದ್ದಾರೆ.
ಬಳಿಕ ನಿನ್ನೆ ಬೆಳಿಗ್ಗೆ ಬಂದಿದ್ದ ಆರೋಪಿಗಳು ಈ ಹಿಂದೆ ತೆಗೆದ ಹೊಂಡದಿಂದ ಒಂದು ಹಿತ್ತಾಳೆಯ ದೇವರ ಮುಖವಾಡ ಒಂದು ಹಿತ್ತಾಳೆಯ ಶಂಖವನ್ನು ತೆಗೆದು ಇದನ್ನು ದೇವರ ಕೋಣೆಯಲ್ಲಿ ಜೋಪಾನವಾಗಿ ಇಡಿ ಎಂದು ಗಗನ ಅವರ ತಂದೆಗೆ ಹೇಳಿ 2 ವಾರ ಬಿಟ್ಟು ಬರುವುದಾಗಿ ಕಾರಿನಲ್ಲಿ ವಾಪಾಸು ಹೋಗಿರುತ್ತಾರೆ.
ಅದರಂತೆ ಆರೋಪಿಗಳು ಹಿತ್ತಿಲಿನಲ್ಲಿ ನಿಧಿ ಇರುತ್ತದೆ ಎಂದು ನಂಬಿಸಿ 95,000 ರೂ. ಪಡೆದುಕೊಂಡು ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.