ದೇಶದ 3 ಲಸಿಕಾ ಕೇಂದ್ರಗಳಿಗೆ ಪ್ರಧಾನಿ ಭೇಟಿ : ವಿಜ್ಞಾನಿ ಗಳೊಂದಿಗೆ ಸಮಾಲೋಚನೆ
ನವದೆಹಲಿ:ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಉಲ್ಬಣಿಸುತ್ತಿರುವುದು ಜನತೆಯಲ್ಲಿ ಮತ್ತೆ ಕೋವಿಡ್ 2 ನೇ ಅಲೆಯ ಬೀತಿ ಸೃಷ್ಟಿಸಿದೆ. ಈ ನಡುವೆ ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಾಗಿದ್ದು, ಈನಿಟ್ಟಿನಲ್ಲಿ ದೇಶದ 3 ಲಸಿಕಾ ಕೇಂದ್ರಗಳಿಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.
ಈ ವಿಚಾರವಾಗಿ ಇಂದು ಅಹಮದಾಬಾದ್’ಗೆ ಭೇಟಿ ನೀಡಿರುವ ಪ್ರಧಾನಿ ಅವರು, ಅಹಮದಾಬಾದ್’ನಿಂದ 20 ಕಿಮೀ ದೂರದಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್’ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಝೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ ಕೊರೋನಾಗೆ ಝೈಕೋವಿಡ್-ಡಿ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. ಝೈಡಸ್ ಬಯೋಟೆಕ್ ಪಾರ್ಕ್’ಗೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ 12.30 ರ ವೇಳೆಗ ವಿಶ್ವದ ಅತೀದೊಡ್ಡ ಲಸಿಕಾ ಉತ್ಪಾದನಾ ಕೇಂದ್ರವಾದ ಪುಣೆಯ ಸೀರಂ ಇನ್’ಸ್ಟಿಟ್ಯೂಟ್’ಗೆ ಭೇಟಿ ನೀಡಲಿದ್ದಾರೆ. ಸೀರಂ ಇನ್ ಸ್ಟಿಟ್ಯೂಟ್ ಬ್ರಿಟನ್’ನ ಆಕ್ಸ್’ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆ ಪಡೆದುಕೊಂಡಿದೆ. ಇನ್ನು ಮಧ್ಯಾಹ್ನದ ಬಳಿಕ ಮೋದಿ ಹೈದರಾಬಾದ್’ನಿಂದ 50 ಕಿ.ಮೀ ದೂರದ ಹಕೀಂಪೇಟ್’ನಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ