ಹಜ್ಜ್ ಯಾತ್ರೆಗೆ ತೆರಳುವವರಿಗೆ ಸರಕಾರದಿಂದ ನಿಗದಿಪಡಿಸಿದ ಮಾನದಂಡ ಪೂರೈಸುವುದು ಕಡ್ಡಾಯ: ಅಬ್ಬಾಸ್ ನಕ್ವಿ
ನವದೆಹಲಿ 22: ಈ ಭಾರಿಯ ಅಂದರೆ 2022ರ ಹಜ್ಜ್ ಯಾತ್ರೆಗೆ ತೆರಳುವವರು ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಬೇಕು, ಮತ್ತು ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ತಿಳಿಸಿದ್ದಾರೆ.
ಈ ಬಗ್ಗೆ ಹಜ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕದ ಮಾನದಂಡಗಳನ್ನು ಆಧರಿಸಿ 2022ರ ಹಜ್ ಯಾತ್ರೆಗೆ ಯಾತ್ರಾರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಹಜ್ ಯಾತ್ರಿಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಬೇಕು, ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹಜ್ ಯಾತ್ರೆ ಪ್ರಕ್ರಿಯೆ ಶೇ 100 ರಷ್ಟು ಡಿಜಿಟಲೀಕರಣವಾಗಿರಲಿದೆ ಎಂದಿರುವ ಅವರು, ನವೆಂಬರ್ ಮೊದಲ ವಾರದಲ್ಲಿ ಹಜ್ ಯಾತ್ರೆ ಕುರಿತು ಪ್ರಕಟಣೆ ಹೊರಡಿಸಲಾಗುತ್ತದೆ. ಇದರ ಜೊತೆಗೆ, ಯಾತ್ರೆಗೆ ತೆರಳಲು ಆನ್‍ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.