ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ ರಸ್ತೆ ತಡೆ ನಡೆಸಲು ಅಧಿಕಾರವಿಲ್ಲ: ಸುಪ್ರೀಂಕೋರ್ಟ್ ತಾಕೀತು
ನವದೆಹಲಿ ಅ.21 : ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ ರಸ್ತೆ ತಡೆ ನಡೆಸಲು ಅಧಿಕಾರವಿಲ್ಲ ಎಂದು ರೈತ ಸಂಘಟನೆಗಳಿಗೆ ‘ಸುಪ್ರೀಂ’ ತಾಕೀತು ಮಾಡಿದೆ.
ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆಯ ಅಂಗವಾಗಿ ನಡೆಸುತ್ತಿರುವ ರಸ್ತೆ ತಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ನಿಮಗೆ ಪ್ರತಿಭಟನೆ ಮಾಡಲು ಹಕ್ಕಿದೆ, ಹಾಗೆಂದ ಮಾತ್ರಕ್ಕೆ ರಸ್ತೆ ತಡೆ ಮಾಡಲು ನಿಮಗೆ ಅಧಿಕಾರವಿಲ್ಲ ಎಂದು ಹೇಳಿದೆ.
ಸುಮಾರು ಒಂದು ವರ್ಷಗಳಿಂದ ದೆಹಲಿಯ ವಿವಿಧ ಭಾಗಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನಾಕಾರರು ರಸ್ತೆ ತಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಕೋರಿ ನೋಯ್ಡಾದ ನಿವಾಸಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದಕ್ಕೊಂದು ಪರಿಹಾರವನ್ನು ನಾವು ಕಂಡುಹಿಡಿಯಲೇಬೇಕಿದೆ. ನಾವು ರೈತರ ಪ್ರತಿಭಟಿಸುವ ಹಕ್ಕನ್ನು ವಿರೋಧಿಸುತ್ತಿಲ್ಲ. ಆದರೆ ಅವರು ರಸ್ತೆಗಳನ್ನು ನಿರ್ಬಂಧಿಸುವುದು ಕಾನೂನು ಪ್ರಕಾರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಹಾಗೂ ಈ ಅರ್ಜಿಯ ವಿಚಾರಣೆಯನ್ನು ಡಿ.7 ಕ್ಕೆ ಮುಂದೂಡಿದೆ.
ಈ ಹಿಂದೆ ಕೂಡ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ರಾಷ್ಟ್ರ ರಾಜಧಾನಿಗೆ ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ರೈತರು ತಡೆದಿದ್ದಾಗ, ರಸ್ತೆಗಳನ್ನು ಶಾಶ್ವತವಾಗಿ ನಿಬರ್ಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.