ಶಿಮ್ಲಾ: 17 ಮಂದಿ ಚಾರಣಿಗರು ನಾಪತ್ತೆ, ತೀವ್ರ ಹುಡುಕಾಟ
ಶಿಮ್ಲಾ ಅ.21 : ಚಾರಣದ ಸಂದರ್ಭದಲ್ಲಿ ಅನೇಕ ಭಾರೀ ಅಪಾಯಕಾರಿ ಸಂದರ್ಭಗಳು ಎದುರಾಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬೆಟ್ಟ, ಗುಡ್ಡಗಳು, ಹಿಮ ಪರ್ವತಗಳನ್ನು ಏರುವ ಸಂದರ್ಭದಲ್ಲಿ ಅಪಾಯಕಾರಿ ಸವಾಲನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಾಪತ್ತೆ ಹಾಗೂ ಪ್ರಾಣಕ್ಕೆ ಕುತ್ತು ತರುವಂತಹ ಘಟನೆಗಳೂ ನಡೆಯುತ್ತದೆ.
ಅಂತಹದೇ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿ ಟ್ರಕ್ಕಿಂಗ್ ಗೆ ತೆರಳಿದ್ದ 17 ಮಂದಿ ನಾಪತ್ತೆಯಾಗಿದ್ದಾರೆ.
ಅ.14 ರಂದು 17 ಮಂದಿ ಚಾರಣಿಗರು ಹರ್ಷಿಲ್ ಮಾರ್ಗದ ಮೂಲಕ ಉತ್ತರಾಖಂಡದ ಉತ್ತರಕಾಶಿಯ ಚಿತ್ಕುಲ್(ಹಿಮಾಚಲ ಪ್ರದೇಶದ ಕಿನ್ನೌರ್) ನತ್ತ ತೆರಳಿದ್ದರು. ಆದರೆ ಈ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಲಾಮ್ಖಾಗಾ ಪಾಸ್ ಬಳಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕಿನ್ನೌರ್ ಡೆಪ್ಯುಟಿ ಕಮಿಷನರ್ ಅಬಿದ್ ಹುಸೈನ್ ಸಾದಿಖ್ ಅವರು, ಕಿನ್ನೌರ್ ಜಿಲ್ಲೆಯ ಉತ್ತರಾಖಂಡದ ಹರ್ಷಿಲ್ ಅನ್ನು ಸಂಪರ್ಕಿಸುವ ಲಾಮ್ಖಾಗಾ ಪಾಸ್ ಅತ್ಯಂತ ದುರ್ಗಮ ಮಾರ್ಗಗಳಲ್ಲಿ ಒಂದಾಗಿದೆ. ನಾಪತ್ತೆಯಾಗಿರವವರ ಹುಡುಕಾಟಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳನ್ನು ಕಳುಹಿಸಲಾಗಿದೆ. ಹಾಗೂ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆಯ ನೆರವನ್ನು ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.