ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿ ಸೇರಿದ್ದ ಕಂದಮ್ಮನಿಗೆ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ನಾಮಕರಣ ಸಂಭ್ರಮ

ಉಡುಪಿ(ಉಡುಪಿ ಟೈಮ್ಸ್ ವರದಿ): ಸುಮಾರು ಮೂರೂ ತಿಂಗಳ ಹಿಂದೆ ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿ ಸೇರಿದ ಮಗುವಿಗೆ ಕೃಷ್ಣಾನುಗ್ರಹ ಸಂಸ್ಥೆಯಲ್ಲಿ ಬುಧವಾರ ನಾಮಕರಣ ಸಂಭ್ರಮ ಮನೆಮಾಡಿತ್ತು. ತೊಟ್ಟಿಲಲ್ಲಿ ಮೂರು ತಿಂಗಳ ಹಸುಗೂಸು ನಲಿಯುತ್ತಿತ್ತು. ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಕಾವೇರಿ ಅವರು ಮುಂದೆ ನಿಂತು ಶಾಸ್ತ್ರೋಕ್ತವಾಗಿ ನಾಮಕರಣ ನೆರವೇರಿಸಿದರು. ಕಂದಮ್ಮನ ಭವಿಷ್ಯ ದೀಪದಂತೆ ಸದಾ ಪ್ರಜ್ವಲಿಸಲಿ ಎಂದು ‘ಪ್ರಜ್ವಲ’ ಎಂಬ ಹೆಸರನ್ನಿಟ್ಟು ಹರಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೃಷ್ಣ ಚಾರಿಟೆಬಲ್‌ ಟ್ರಸ್ಟ್‌, ಪೊಲೀಸ್ ಇಲಾಖೆ, ನಾಗರಿಕ ಸೇವಾ ಸಮಿತಿ, ಮಕ್ಕಳ ಸಹಾಯವಾಣಿ, ಹೀಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳು ಮಗುವಿನ ‘ಬಂಧುಗಳ’ ಸ್ಥಾನದಲ್ಲಿ ನಿಂತು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.

ಮಗುವಿನ ಕುರಿತು ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ಯ ‘ಮಗು ಆರೋಗ್ಯ ವಾಗಿದ್ದು, ಬಹಳ ಮುದ್ದಾಗಿದೆ. ಮುಂದೆ, ಕಾನೂನು ಪ್ರಕಾರ ಮಗುವನ್ನು ದತ್ತು ನೀಡಲಾಗುವುದು’ ಎಂದರು.

ಆನ್‌ಲೈನ್‌ನಲ್ಲಿ ದತ್ತು ಪಡೆಯಲು ಅರ್ಜಿ ಸಲ್ಲಿಸಿದ ಪೋಷಕರಿಗೆ ಮಗುವನ್ನು ದತ್ತು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಭಾಕರ್ ಆಚಾರ್ಯ ಮಾಹಿತಿ ನೀಡಿದರು.‌

ಅಂತರರಾಷ್ಟ್ರೀಯ ದತ್ತು ಮಾಸಾಚರಣೆ 2020 ಅಂಗವಾಗಿ ಹಮ್ಮಿಕೊಂಡಿದ್ದ ಮಡಿಲ ಬೆಳಗು ದತ್ತು ಕಾರ್ಯಕ್ರಮ ಹಾಗೂ ಶಿಶುವಿನ ನಾಮಕರಣ ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್‌, ಮಹಿಳಾ ಠಾಣೆ ಪಿಎಸ್‌ಐ ವೈಲೆಟ್‌ ಫಿಲೊಮಿನಾ, ಶ್ರೀಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಉಮೇಶ್‌ ಪ್ರಭು, ಜಿಲ್ಲಾ ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!