ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು : ಅನ್ನದಾತರಿಂದ `ದೆಹಲಿ ಚಲೋ’
ನವದೆಹಲಿ (ಉಡುಪಿ ಟೈಮ್ಸ್ ವರದಿ) : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂಧೆಗಳ ವಿರುದ್ಧ ರೈತರು ದೆಹಲಿ ಚಲೋ ಎಂಬ ಹೋರಾಟ ಆರಂಭಿಸಿದ್ದಾರೆ.
ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಜಮಾಯಿಸಿದ ರೈತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ದೆಹಲಿಯವರೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈ ಹೋರಾಟಕ್ಕೆ ಕೈ ಜೋಡಿಸಲು ದೆಹಲಿ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಿಂದ ರೈತರು ಟ್ರ‍್ಯಾಕ್ಟರ್ ಮೂಲಕ ಆಗಮಿಸಲಿದ್ದು ಇಂದಿಂದ ದೆಹಲಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವ ಸಲುವಾಗಿ ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ದೆಹಲಿ ರಾಜ್ಯದ ಗಡಿಯೊಳಗೆ ಇತರೆಡೆಗಳಿಂದ ರೈತರು ಒಳಬರದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.
ಈ ನಡುವೆ ದಿಲ್ಲಿ ಚಲೋ ಮೆರವಣಿಗೆಯಲ್ಲಿ ಭಾಗವಹಸಿಸಲು ದಿಲ್ಲಿಯತ್ತ ಬರುತ್ತಿದ್ದ ಸಾವಿರಾರು ರೈತರನ್ನು ಪೊಲೀಸರು ಹರಿಯಾಣ ಗಡಿಯಲ್ಲಿ ಬ್ಯಾರಿಕೇಡ್ ಇಟ್ಟು ತಡೆದಿದ್ದಾರೆ. ಈ ವೇಳೆ ಸೇತುವೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ನ್ನು ರೈತರು ನದಿಗೆ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಭಾಸುವ ಸಲುವಾಗಿ ಪೊಲೀಸರು ರೈತರ ಮೇಲೆ ಆಶ್ರುವಾಯು ಪ್ರಯೋಗಿಸಿ ರೈತರನ್ನು ಚದುರಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.