ತೂಗು ಸೇತುವೆಯ ಹರಿಕಾರ ಗಿರೀಶ್ ಭಾರಧ್ವಜ್ ಗೆ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ

ಕೋಟ(ಉಡುಪಿ ಟೈಮ್ಸ್ ವರದಿ): ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.)ದ ಸಹಭಾಗಿತ್ವದಲ್ಲಿ ಕಳೆದ ಹದಿನಾರು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದ್ದು ಈ ಬಾರಿ “ಸೇತುಬಂಧು” ಎಂದೇ ಕರೆಯಲ್ಪಡುವ ಗಿರೀಶ್ ಭಾರದ್ವಾಜ್ ರವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಗಿರೀಶ್ ಭಾರದ್ವಾಜ್ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ಹೊಸ ಬೆಳಕು ಮೂಡಿಸುವಂತೆ 130 ತೂಗು ಸೇತುವೆ ನಿರ್ಮಾಣ ಮಾಡಿದವರು. ಅಲ್ಲದೇ ಸಮಾಜ ಸೇವೆಯಲ್ಲೂ ಕ್ರೀಯಾಶೀಲರಾದವರು. ಇವರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಸಾಧನೆಗಳನ್ನ ಗುರುತಿಸಿ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2021ರ ಸಾಲಿನಲ್ಲಿ “ಗಿರೀಶ್ ಭಾರದ್ವಾಜ್” ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ

ಈಗಾಗಲೇ ವೀರಪ್ಪ ಮೊಯ್ಲಿ, ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ | ಬಿ. ಎಂ ಹೆಗ್ಡೆ,ಪ್ರಕಾಶ್ ರೈ, ಪಡ್ರೆ , ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪ್ರದಾನ ಮಾಡಲಾಗಿತ್ತು.

ಅಕ್ಟೋಬರ್ ಹತ್ತರಂದು ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ದಿನ ಡಾ. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗುತ್ತದೆ. ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಅಕ್ಟೋಬರ್ ಒಂದರಿಂದ ಹತ್ತರವರೆಗೆ ಹತ್ತು ದಿನಗಳ ಸಾಂಸ್ಕೃತಿಕ- ಸಾಹಿತ್ಯಿಕ ಸುಗ್ಗಿ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾಗಿದೆ. ಕಾರಂತ ಚಿಂತನ,-ನೃತ್ಯ ಪ್ರದರ್ಶನ, ಸಂಗೀತ ಸುಧೆ-ಯಕ್ಷ-ನಾಟ್ಯ-ವೈಭವ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರಂತ ಥೀಮ್ ಪಾರ್ಕ್ ಯುಟ್ಯೂಬ್ ಹಾಗೂ ಪೇಸ್ ಬುಕ್ ಪೇಜ್ ನಲ್ಲಿ ಪ್ರಸಾರಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!