ಕಟಪಾಡಿ: ಪಿತ್ರೋಡಿ ಭಾಗದ ಹೊಳೆಯಲ್ಲಿ ಸಾಯುತ್ತಿರುವ ಮೀನುಗಳು, ಮಾದರಿ ಪರೀಕ್ಷೆಗೆ ರವಾನೆ

ಕಟಪಾಡಿ ಸೆ.23(ಉಡುಪಿ ಟೈಮ್ಸ್ ವರದಿ) : ಉದ್ಯಾವರ ಪಿತ್ರೋಡಿ ಭಾಗದ ಹೊಳೆಯಲ್ಲಿ ಸತ್ತ ಮೀನುಗಳು ದಡ ಸೇರುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.ಇದೀಗ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯರ ಸಹಕಾರದೊಂದಿಗೆ ಹೊಳೆಯ ನೀರು ಮತ್ತು ಸತ್ತಿರುವ ಮೀನುಗಳ ಸ್ಯಾಂಪಲ್ಸ್ ನ್ನು ತೆಗೆದು ಪರೀಕ್ಷೆ ನಡೆಸಲು ರವಾನಿಸಿದ್ದಾರೆ.

ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದ ವೇಳೆ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದಗಳು ನಡೆಯಿತು. ಈ ವೇಳೆ ಸ್ಥಳೀಯರು, ಅಧಿಕಾರಿಗಳು ಫಿಶ್ ಮೀಲ್ ಪರವಿದ್ದಾರೆ ಎಂಬ ಆರೋಪ ನಡೆಸಿದ್ದಾರೆ. ಈ ಬಾರಿ ಹಾಗಾಗದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಈ ಭಾಗದಲ್ಲಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಸೂಕ್ತ ಪರಿಶೀಲನೆಯನ್ನು ನಡೆಸಬೇಕು. ನಿಷ್ಪಕ್ಷಪಾತ ವರದಿಯನ್ನು ಸಲ್ಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಹಾಗೂ ಇದೇ ವೇಳೆ ಪರಿಶೀಲನೆಗೆ ಬಂದ ಅಕಾರಿಗಳಿಗೆ ತೆಂಗಿನಕಾಯಿಯನ್ನು ಮುಟ್ಟಿಸಿ ಪ್ರಮಾಣ ಪಡೆದುಕೊಂಡಿರುವ ಘಟನೆಯೂ ನಡೆಯಿತು.

ಈ ಬಗ್ಗೆ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ ಅವರು ಮಾತನಾಡಿ , ನದಿ ನೀರಿನಲ್ಲಿ ಕರಗಿರುವ ಆಮ್ಲಜನಕದ ಕೊರತೆಯಿಂದ ಅಥವಾ ಉಷ್ಣತೆ ಹೆಚ್ಚಾದಾಗ ಅಥವಾ ವಿಷ ವಸ್ತು ನೀರಿನಲ್ಲಿ ಸೇರಿದಾಗ ಮೀನು ಸಾವಿಗೀಡಾಗಿರುವ ಸಾಧ್ಯತೆ ಇದೆ. ಇಲ್ಲಿ ಪರಿವೀಕ್ಷಣೆ ಮಾಡಿದಾಗ, ನದಿಯನ್ನು ಡಂಪಿಂಗ್ ಯಾರ್ಡ್ ನಂತೆ ಈ ಭಾಗದಲ್ಲಿ ತ್ಯಾಜ್ಯಗಳಿಂದ ಕಂಡು ಬರುತ್ತಿದ್ದು, ನದಿಯ ತಳದಲ್ಲಿ ಕೊಳೆತ ತ್ಯಾಜ್ಯ ವಸ್ತುಗಳಿಂದ ಉಂಟಾಗಬಹುದಾದ ಆಮ್ಲಜನಕದ ಕೊರತೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿರುತ್ತಾರೆ. ಸ್ಥಳೀಯರ ವಾಗ್ವಾದದ ಬಗ್ಗೆ ಮಾತನಾಡಿ, ಗ್ರಾ.ಪಂ. ಆಡಳಿತವು ನದಿಯಲ್ಲಿ ಅಳವಡಿಸಲಾಗಿರುವ ಪೈಪ್ ಲೈನ್ ತೆರವುಗೊಳಿಸುವಂತೆ ಒತ್ತಾಯಿಸುತ್ತಿದ್ದು, ಈ ಬಗ್ಗೆ ಈಗಾಗಲೇ ಪೈಪ್ ಅಳವಡಿಸಿದ ಸ್ಥಳೀಯ ಫಿಶ್ ಮೀಲ್ ಘಟಕಕ್ಕೆ ತೆರವುಗೊಳಿಸುವಂತೆ ನೋಟೀಸ್ ನೀಡಿ ಸೂಚಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಸ್ಥಳದಲ್ಲಿದ್ದ ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ಅವರು, ಫಿಶ್ ಮೀಲ್ ಘಟಕಗಳ ಅಪಾಯಕಾರಿ ಮಲೀನ ತ್ಯಾಜ್ಯ ಹೊಳೆಯ ನೀರನ್ನು ಸೇರುವ ಪರಿಣಾಮ ಜಲಚರ ಮೀನುಗಳು ಸತ್ತ ಸ್ಥಿತಿಯಲ್ಲಿ ದಡ ಸೇರುತ್ತಿದ್ದು, ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಫಿಶ್ ಮೀಲ್ ಘಟಕವು ನದಿಯಲ್ಲಿ ಅಳವಡಿಸಿರುವ ಪೈಪ್ ಲೈನ್ ತೆರವುಗೊಳಿಸುವಂತೆ ಆದೇಶಿಸುವ ಜೊತೆಗೆ ಖುದ್ದಾಗಿ ಅಧಿಕಾರಿಗಳು ಸ್ಥಳದಲ್ಲಿದ್ದು, ತೆರವುಗೊಳಿಸಬೇಕು. ಅಧಿಕಾರಿಗಳು ತಿಳಿಸುವಂತೆ ಘಟಕವು ಇಟಿಪಿ ಪ್ಲಾಂಟ್ ಅಳವಡಿಸಿ ಕಾರ್ಯಾಚರಿಸುತ್ತಿದ್ದರೆ ಆ ನೀರನ್ನು ತೋಟ, ಗಾರ್ಡನ್ ಗೆ ಅಥವಾ ಇತರೇ ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳಲಿ ಹೊರತು ಹೊಳೆಗೆ ಬಿಡುವುದು ಸಮಂಜಸ ಅಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧಿಕಾರಿ ಪ್ರಮೀಳಾ, ಮೀನುಗಾರಿಕಾ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಗ್ರಾ.ಪಂ. ಸದಸ್ಯ ಗಿರೀಶ್ ಸುವರ್ಣ, ಸಚಿನ್ ಸುವರ್ಣ ಪಿತ್ರೋಡಿ, ಲಾರೆನ್ಸ್ ಡೇಸಾ, ದಿವಾಕರ ಬೊಳ್ಜೆ, ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!