ಸುಳ್ಳಿಗೆ ಆಸ್ಕರ್ ಪ್ರಶಸ್ತಿ ಇದ್ದಿದ್ದರೆ ಅದು ಪ್ರಧಾನಿಗೇ ಸಲ್ಲುತ್ತದೆ: ಸಲೀಂ ಅಹಮದ್

ಬೆಳಗಾವಿ ಸೆ.22 (ಉಡುಪಿ ಟೈಮ್ಸ್ ವರದಿ) : ಸುಳ್ಳು ಹೇಳುವುದಕ್ಕೆ ಏನಾದರೂ ಆಸ್ಕರ್ ಪ್ರಶಸ್ತಿ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರಿಗೇ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಕಳೆದ 7 ವರ್ಷಗಳಿಂದ ಪ್ರಧಾನಿ ಮೋದಿ ಬರೀ ಸುಳ್ಳು ಹೇಳ್ತಿದ್ದಾರೆ. ಅವರು ಸುಳ್ಳು ಹೇಳಿಕೊಂಡೇ ಅಧಿಕಾರಕ್ಕೆ ಬಂದಿದ್ದಾರೆ. ಕೋವಿಡ್ ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಮೋದಿ ಸರ್ಕಾರದಿಂದಾಗಿ ಜನರ ಜೀವನ ನರಕವಾಗಿದ್ದು, ಮೂರನೆ ಅಲೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಸರಕಾರ ಕೋವಿಡ್‍ನಿಂದ ಮೃತಪಟ್ಟವರ ಅಂಕಿ ಅಂಶದ ವಿಚಾರದಲ್ಲಿ ಸ್ಪಷ್ಟತೆ ಹೊಂದಿಲ್ಲ ಎಂದು ಆರೋಪಿಸಿದ ಅವರು, ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅನೇಕರು ಬೀದಿಗೆ ಬಂದಿದ್ದಾರೆ. ಎರಡನೇ ಅಲೆಯಲ್ಲಿ 3.70 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಸಚಿವ ಸುಧಾಕರ್ ಅವರು ಕೇವಲ 37 ಸಾವಿರ ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಾರೆ ಎಂದು ಹೇಳಿದರು.

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿಚಾರವಾಗಿ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ ಟೇಕಾಫ್ ಆಗಿದೆಯಾ ಅನ್ನೋದು ನನಗಂತೂ ಕಾಣುತ್ತಿಲ್ಲ. ಬಿಜೆಪಿ ಈಗ ಮೂರು ಬಾಗಿಲ ಮನೆಯಾಗಿದೆ. ಬೊಮ್ಮಾಯಿ ಮಧ್ಯದಲ್ಲಿ ಸಿಲುಕಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಆರ್.ಎಸ್.ಎಸ್. ಹಾಗೂ ಹೈಕಮಾಂಡ್ ಈ ಮೂವರಲ್ಲಿ ಯಾರ ಮಾತು ಕೇಳಬೇಕು ಎಂಬ ಗೊಂದಲದಲ್ಲಿ ಮುಖ್ಯಮಂತ್ರಿಗಳಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!