ಕಡಬ: ದಾದಿ ಮರಿಯಮ್ಮಗೆ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೆಲ್ ಪ್ರಶಸ್ತಿ
ಕಡಬ, ಸೆ 20 : 2020ನೇ ಸಾಲಿನ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೆಲ್ ಪ್ರಶಸ್ತಿಯು ದ.ಕ ಜಿಲ್ಲೆಯ ಕಡಬ ಮೂಲದ ದಾದಿ ಮರಿಯಮ್ಮ ಅವರಿಗೆ ಲಭಿಸಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿಯಾಗಿರುವ ಇವರು ಹೊಸಕೋಟೆಯ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ (ಎ.ಎನ್.ಎಂ.)ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ವರ್ಗಾವಣೆಗೊಂಡು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹೊಸಕೋಟೆ ತಾಲೂಕಿನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ಲಭಿಸಿದೆ. ಕೋವಿಡ್ ಕಾರಣದಿಂದಾಗಿ ಸೆ. 15 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಇನ್ನು ದೇಶಾದ್ಯಂತ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೆಲ್ ಪ್ರಶಸ್ತಿಗೆ ಒಟ್ಟು 51 ಮಂದಿ ಆಯ್ಕೆಗೊಂಡಿದ್ದರು.
1990ರಲ್ಲಿ ಸೇವೆಗೆ ಸೇರಿದ್ದ ಇವರು, ಕಳೆದ 30 ವರ್ಷಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಗೆ 2007ರಲ್ಲಿ ಉತ್ತಮ ಹೆಲ್ತ್ ಅಸಿಸ್ಟೆಂಟ್ ಅವಾರ್ಡ್, 2011ರಲ್ಲಿ ಬೆಸ್ಟ್ ಸಬ್‍ಸೆಂಟರ್ ಅವಾರ್ಡ್‍ಗಳು ಕೂಡಾ ಲಭಿಸಿದೆ.