ಯುವ ಸಮುದಾಯ ಮಾತೃಭಾಷೆ ಮರೆತು ಪಾಶ್ಚಾತ್ಯ ಭಾಷೆಗಳಿಗೆ ಹೆಚ್ಚಿನ ಒಲವು ಖೇದಕರ- ವಂ.ಸ್ಟ್ಯಾನಿ ಲೋಬೊ

ಉಡುಪಿ: ಇಂದಿನ ಯುವ ಸಮುದಾಯ ಮಾತೃಭಾಷೆ ಮರೆತು ಪಾಶ್ಚಾತ್ಯ ಭಾಷೆಗಳಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಖೇದಕರ ಸಂಗತಿಯಾಗಿದ್ದು ಮಾತೃಭಾಷೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವಂತಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚಿನ ಧರ್ಮಗುರುಗಳಾದ ವಂ|ಸ್ಟ್ಯಾನಿ ಬಿ ಲೋಬೊ ಹೇಳಿದರು.

ಅವರು ಭಾನುವಾರ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ 2020-21 ನೇ ಸಾಲಿನ ವಾರ್ಷಿಕ ಮಹಾ ಸಭೆ, ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್‌ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಂಕಣಿ ಭಾಷೆ ಅತೀ ಪ್ರಿಯವಾದ ಭಾಷೆಯಾಗಿದ್ದು ಇಂದು ಅದು ಕೇವಲ ಅಲಂಕಾರಿಕಾ ಭಾಷೆಯಾಗುತ್ತಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಭಾಷೆ ಸೀಮಿತವಾದಂತಿದ್ದು ಯುವ ಸಮುದಾಯ ಈ ಭಾಷೆಯತ್ತ ಅಕರ್ಷಣೆ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕೊಂಕಣಿ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರು ತಮ್ಮ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಲೇಖಕರು ಆಗಿರುವ ವಂ|ಚೇತನ್‌ ಲೋಬೊ ಇವರ ಚೇತನ ಚಿಂತನ ಕೃತಿಗೆ ಈ ಸಾಲಿನ ಫ್ರಾನ್ಸಿಸ್‌ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ|ಜೆರಾಲ್ಡ್‌ ಪಿಂಟೊ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ನೀಡಿದರು.

ಇದೇ ವೇಳೆ ಡೆನಿಸ್‌ ಡಿʼಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಮಾಡಲಾಯಿತು. ಆಲ್ಫೋನ್ಸ್‌ ಡಿʼಕೋಸ್ತಾ ಬಹುಮಾನಿತರ ವಿವರಗಳನ್ನು ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಉಜ್ವಾಡ್‌ ಪ್ರಕಾಶನ ಹೊರತಂದಿರುವ ಜೋಸೆಫ್‌ ಕ್ವಾಡ್ರಸ್‌ ಅವರ ವಿನೋದ ಬರಹಗಳ ಓಲ್ಡ್‌ ಮೆನ್ಸ್‌ ಕ್ಲಬ್‌ ಪುಸ್ತಕದ ಅನಾವರಣ ನಡೆಸಲಾಯಿತು. ಉಜ್ವಾಡ್‌ ಪತ್ರಿಕೆಯ ಸಂಪಾದಕರಾದ ವಂ|ರೊಯ್ಸನ್‌ ಫೆರ್ನಾಂಡಿಸ್‌ ಪುಸ್ತಕದ ಪರಿಚಯ ನೀಡಿದರು.

ಕೆಥೊಲಿಕ್‌ ಸಭೆಯ ಸ್ಥಾಪಕ ಅಧ್ಯಕ್ಷರಾದ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ಸಂಘಟನೆಯ ಪರವಾಗಿ ಶೃದ್ಧಾಂಜಲಿ ಅರ್ಪಿಸ ಲಾಯಿತು. ಸಂಘಟನೆಯ ಮಾಜಿ ಅಧ್ಯಕ್ಷರಾದ ಅಲ್ಫೋನ್ಸ್‌ ಡಿʼಕೋಸ್ತಾ ಆಸ್ಕರ್‌ ಫೆರ್ನಾಂಡಿಸ್‌ ಅವರ ಸೇವೆಯನ್ನು ನೆನೆದು ನುಡಿನಮನ ಸಲ್ಲಿಸಿದರು. 2020-21 ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಮೇರಿ ಡಿʼಸೋಜಾ ವಹಿಸಿ ಸಭೆಯನ್ನು ನಡೆಸಿಕೊಟ್ಟರು.

2019-20 ರ ಸಾಲಿನ ವಾರ್ಷಿಕ ಮಹಾಸಭೆಯ ವರದಿಯನ್ನು ಸಹಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ವಾಚಿಸಿದರು. 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿʼಸೋಜಾ, ಮಂಡಿಸಿದರೆ, ಲೆಕ್ಕಪತ್ರದ ಮಂಡನೆ ಹಾಗೂ ಮುಂದಿನ ವರ್ಷದ ಆಯವ್ಯಯ ಮಂಡನೆಯನ್ನು ಕೋಶಾಧಿಕಾರಿ ಜೆರಾಲ್ಡ್‌ ರೊಡ್ರಿಗಸ್‌ ಮಾಡಿದರು. ಮಾನಸ ಸಂಸ್ಥೆಯ ವರದಿಯನ್ನು ಅಧ್ಯಕ್ಷರಾದ ಹೆನ್ರಿ ಮಿನೇಜಸ್‌ ಮತ್ತು ಸಶಕ್ತ ಸಮುದಾಐ ಟ್ರಸ್ಟ್‌ ವರದಿಯನ್ನು ಅಧ್ಯಕ್ಷರಾದ ವಾಲ್ಟರ್‌ ಸಿರಿಲ್‌ ಪಿಂಟೊ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ನಿಕಟಪೂರ್ವ ಅಧ್ಯಕ್ಷರಾದ ರೊಬರ್ಟ್‌ ಮಿನೇಜಸ್‌, ಮಾಜಿ ಅಧ್ಯಕ್ಷರಾದ ವಲೇರಿಯನ್‌ ಫೆರ್ನಾಂಡಿಸ್‌, ವಲಯದ ಅಧ್ಯಕ್ಷರುಗಳಾದ ಲವೀನಾ ಪಿರೇರಾ ಉಡುಪಿ, ಲೀನಾ ಮಚಾದೋ, ಶಿರ್ವಾ, ಲೂಯಿಸ್‌ ಡಿಸೋಜಾ ಕಲ್ಯಾಣಪುರ, ಮೇಬಲ್‌ ಡಿಸೋಜ ಕುಂದಾಪುರ, ಸೊಲೋಮನ್‌ ಅಲ್ವಾರಿಸ್‌ ಕಾರ್ಕಳ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷರಾದ ಸಂತೋಷ್‌ ಕರ್ನೆಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿʼಸೋಜಾ ವಂದಿಸಿದರು. ಮೇಬಲ್‌ ಡಿʼಸೋಜಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!