ಪ್ರಾರ್ಥನ ಮಂದಿರದ ಮೇಲೆ ದಾಳಿ: ಕ್ರಮಕೈಗೊಳ್ಳದಿದ್ದರೆ ‘ಕಾರ್ಕಳ ಚಲೋ’-ಯಾಸೀನ್ ಕೋಡಿಬೆಂಗ್ರೆ

ಉಡುಪಿ: ಮತಾಂತರದ ಸುಳ್ಳು ಆರೋಪ ಹೊರಿಸಿ ಕಾರ್ಕಳದ ಪ್ರಾರ್ಥನ ಮಂದಿರದ ಮೇಲೆ ದಾಳಿ ನಡೆಸಿರುವುದು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿಯು ಈ ಅಮಾನವೀಯ ಘಟನೆಯನ್ನು ಖಂಡಿಸುತ್ತದೆ ಎಂದು ಸಾಲಿಡಾರಿಟಿ ಉಡುಪಿ ಜಿಲ್ಲಾ ಸಂಚಾಲಕರಾದ ಯಾಸೀನ್ ಕೋಡಿಬೆಂಗ್ರೆ ಹೇಳಿದ್ದಾರೆ.

ಸಂಘ ಪರಿವಾರದ ದುಷ್ಕರ್ಮಿಗಳು ಮಹಿಳೆಯರು, ಮಕ್ಕಳೆನ್ನದೆ ಏಕಾಏಕಿ ನುಗ್ಗಿ ಪ್ರಾರ್ಥನ ಮಂದಿರದ ಮೇಲೆ ದಾಳಿ ನಡೆಸಿದೆ. ಅದರೊಂದಿಗೆ ಸಂತ್ರಸ್ತರ ಮೇಲೆಯೇ ಕೇಸು ದಾಖಲಿಸಲಾಗಿದೆ. ಇದು ಸಂವಿಧಾನ ನೀಡಿದ ಮೂಲಭೂತ ಹಕ್ಕಿನ ಉಲ್ಲಂಘನೆ ಯಾಗಿದೆ.‌ ಅದರೊಂದಿಗೆ ಮುಖ್ಯವಾಗಿ ಧಾರ್ಮಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಧಾರ್ಮಿಕ ಅಲ್ಪ ಸಂಖ್ಯಾತರಲ್ಲಿ ಈ ರೀತಿಯ ಘಟನೆ ಆತಂಕ ಸೃಷ್ಟಿಸುತ್ತದೆ. ಈ ಹಿನ್ನಲೆಯಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇವೆ. 

ಈ ದೇಶದಲ್ಲಿ ಕೋಮು ಸಾಮರಸ್ಯದೊಂದಿಗೆ ಬದುಕುವ ಒಂದು ಪರಂಪರೆಯಿದೆ. ಪರಸ್ಪರ ಸಹಕಾರ, ಧಾರ್ಮಿಕ ಸಹಾನುಭೂತಿ ಯೊಂದಿಗೆ ಬದುಕುವುದು ನಮ್ಮ ಸಂಸ್ಕೃತಿಯಾಗಿದೆ. ಸಂಘಪರಿವಾರದ ಇಂತಹ ಕೃತ್ಯವು ಸಂವಿಧಾನದ ಜಾತ್ಯಾತೀತ ಬುನಾದಿಗೆ ಮಾರಕವಾಗಿದೆ. ಇಂತಹ ಸಂವಿಧಾನ ಬಾಹಿರ ಕೃತ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರೊಂದಿಗೆ ಸಂತ್ರಸ್ತರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಎಲ್ಲ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ನ್ಯಾಯಕ್ಕಾಗಿ ಆಗ್ರಹಿಸಿ ಕಾರ್ಕಳ ಚಲೋ ಹಮ್ಮಿಕೊಳ್ಳಬೇಕಾಗಬಹುದೆಂದು ಈ ಮೂಲಕ ಪ್ರಭುತ್ವಕ್ಕೆ ತಿಳಿಸಲು ಇಚ್ಚಿಸುತ್ತೇವೆ. ಅದರೊಂದಿಗೆ ಎಪಿಸಿಆರ್ ಸಹಯೋಗದೊಂದಿಗೆ ನ್ಯಾಯಾಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಲು ನಾವು ಸಿದ್ದರಿದ್ದೇವೆಂದು ಸಾಲಿಡಾರಿಟಿಯ ಯಾಸೀನ್ ಕೋಡಿಬೆಂಗ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!