ಕಾರ್ಕಳ: ಪ್ರಾರ್ಥನಾ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ದಾಳಿ

ಕಾರ್ಕಳ: ಕಳೆದ ಹತ್ತು ವರ್ಷಗಳಿಂದ ಬೆನಡಿಕ್ಟ್‌ ಎಂಬಾತನ ನೇತೃತ್ವದಲ್ಲಿ ಮತಾಂತರ ಕೆಲಸದಲ್ಲಿ ಪ್ರಾರ್ಥನಾ ಕೇಂದ್ರ ನಿರತವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಸಿ, 60ಕ್ಕೂ ಅಧಿಕ ಮಹಿಳೆಯರನ್ನು ಹತ್ತು ಮಕ್ಕಳನ್ನು ಸೇರಿಸಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಪ್ರಾರ್ಥನಾಲಯಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದು ದಾಳಿಯಿಂದಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್‌ ಕುಕ್ಕೆಹಳ್ಳಿ ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿದ್ದಾರೆ. ಈ ಬಗ್ಗೆ ಆರಂಭದಿಂದಲೂ ಹಿಂದು ಜಾಗರಣ ವೇದಿಕೆ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದೆ. ಇಂದು ಸೂಕ್ತ ಮಾಹಿತಿಗಳು ಇದ್ದ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ. ಪೊಲೀಸರ ಕೇಂದ್ರಕ್ಕೆ ಹೋಗಿ ವಿಚಾರಿಸಿದ್ದಾರೆ ಅದ್ದೂರಿ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಟ್ಟಿಲ್ಲ ಆದರೆ ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ.ಮತಾಂತರಿಗಳಿಗೆ ಕೋವಿಡ್ ನಿಯಮ ಪಾಲನೆ ಇಲ್ಲವೇ? ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಮತಾಂತರ ಕೇಂದ್ರಗಳಿವೆ ಇನ್ನಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ದಾಳಿ ಮುಂದುವರಿಸುತ್ತೇವೆ. ಪರಿಸ್ಥಿತಿ ಹದಗೆಡಲು ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ಇಲ್ಲಿ ನಾವು ಯಾವುದೇ ಮತಾಂತರ ಮಾಡುತ್ತಿಲ್ಲ. ನಾವು ಪ್ರಾರ್ಥನೆ ಮಾತ್ರ ಮಾಡುತ್ತಿದ್ದೇವೆ ಎಂದು ಕಾರ್ಕಳದ ಮತಾಂತರ ಕೇಂದ್ರದ ಮುಖ್ಯಸ್ಥ ಬೆನೆಡಿಕ್ಟ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಂಗಳೂರಿನ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಕೇಂದ್ರ. ನಾವು ಯಾರನ್ನೂ ಮತಾಂತರ ಮಾಡುವುದಿಲ್ಲ. ಅನ್ಯ ಧರ್ಮದವರು ಕೆಲವರು ಪ್ರಾರ್ಥನೆಗಾಗಿ ಬರುತ್ತಾರೆ. ಇವತ್ತು ಪ್ರಾರ್ಥನೆ ನಡೆಸುತ್ತಿರುವಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಏಕಾಏಕಿ ನುಗ್ಗಿ ಗಲಾಟೆ ಮಾಡಿದ್ದಾರೆ. ವಿಡಿಯೋ ತೆಗೆದಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮತಾಂತರ ಮಾಡುವುದು ನಮ್ಮ ಕೆಲಸ ಅಲ್ಲ.ನಾವು ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಿದ್ದೆವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕ್ರೈಸ್ತ ಒಕ್ಕೂಟ ಖಂಡನೆ: ಪ್ರಾರ್ಥನಾ ಸ್ಥಳಕೆ ಅಕ್ರಮ ಪ್ರವೇಶ ಮಾಡಿ ಕೈಸ್ತರು ಮತಾಂತರ ಮಾಡುತ್ತಾರೆ ಎಂಬ ಸುಳ್ಳು ಆರೋಪ ವನ್ನು ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ಅಕ್ರಮ ಪ್ರವೇಶ ಮಾಡಿ ಮಹಿಳೆಯರು ಮಕ್ಕಳು ಮತ್ತು ಇತರರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದ ಸುಳ್ಳು ಆರೋಪ ಮಾಡಿದ ಜನರ ವಿರುದ್ಧ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸುತ್ತದೆ.

ನಮ್ಮ ಕ್ರೈಸ್ತ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರದ ಪ್ರಾರ್ಥನೆ ವಿಧಿವಿಧಾನಗಳು ಮಾಡುವ ಸಮಯದಲ್ಲಿ ಒಂದು ಗುಂಪು ಜನ  ಭಯೋತ್ಪಾದಕರಂತೆ ಒಳಗೆ ನುಗ್ಗಿ ದೇವರಿಗೆ ಸಲ್ಲಿಸುತ್ತಿರುವ ಪ್ರಾರ್ಥನೆ ಬಲವಂತ ನಿಲ್ಲಿಸಿ ನೀವು ಮತಾಂತರ ಮಾಡುತ್ತೀರಿ ಎಂದು ಸುಳ್ಳು ಆರೋಪ ಮಾಡಿ ಮಹಿಳೆಯರೊಂದಿಗೆ ಅಸಭ್ಯಬಾಗಿ ವರ್ತಿಸಿ ಅವರಿಗೆ ಹೊಡೆದು ಇತರರಿಗೆ ಬೆದರಿಕೆ ಒಡ್ಡಿ ದೈಹಿಕ ಹಲ್ಲೆ ಮಾಡಿ ಭಯಹುಟ್ಟಿಸಿದಂತ ಭಯೋತ್ಪಾದಕ ಗುಂಪನ್ನು ತಕ್ಷಣ ಬಂಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷ ಕೊಡಿಸುವ ಕಾರ್ಯ ಪೊಲೀಸ್ ಇಲಾಖೆ ತಕ್ಷಣ ಮಾಡಬೇಕೆಂದು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಪ್ರಶಾಂತ್ ಜತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!