ಉಡುಪಿ: ನ. 22 “ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ” ಪ್ರದಾನ ಸಮಾರಂಭ
ಉಡುಪಿ (ಉಡುಪಿ ಟೈಮ್ಸ್ ವರದಿ): ತುಳುಕೂಟ (ರಿ) ಉಡುಪಿ ವತಿಯಿಂದ ,ತುಳು ನಾಡು,ಭಾಷೆ,ಸಾಹಿತ್ಯದ ಕ್ಷೇತ್ರಕ್ಕೆ ಅದ್ವಿತೀಯವಾದ ಸೇವೆ, ಕೊಡುಗೆಯನ್ನು ನೀಡಿದ ದಿ.ಎಸ್.ಯು.ಪಣಿಯಾಡಿಯವರ ಸ್ಮರಣಾರ್ಥ ,ಕೊಡಲ್ಪಡುವ ಪ್ರತಿಷ್ಠಿತ ,”ಪಣಿಯಾಡಿ ತುಳುಕಾದಂಬರಿ ಪ್ರಶಸ್ತಿ” ಪ್ರದಾನ ಸಮಾರಂಭವು ನ 22 ರಂದು ಸಂಜೆ 4 ಗಂಟೆಗೆ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ, ತುಳು ಬರಹಗಾರ್ತಿ, ಕವಯತ್ರಿ, ಕುಶಾಲಾಕ್ಷಿ ಕಣ್ವತೀರ್ಥ ಇವರು ಬರೆದ “ಕಡಲಮುತ್ತು” ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯು ಲಭಿಸಿದ್ದು, ಉಡುಪಿ ಶಾಸಕರಾದ ರಘುಪತಿ ಭಟ್ ಇವರು ಈ ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ,ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಇವರ ಸಹಕಾರದೊಂದಿಗೆ ಮುದ್ರಣಗೊಂಡ, ಜಿಲ್ಲೆಯ ಹಿರಿಯ ಸಾಹಿತಿಗಳಾದ ಅಂಶುಮಾಲಿ ಇವರು ಬರೆದ “ಅಗೋಳಿ ಮಂಜಣ್ಣ” ನಾಟಕದ ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದೆ. ಇದರೊಂದಿಗೆ ಈ ಸಮಾರಂಭದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ,ತುಳುಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯನ್ನಾಗಿ ಆಯ್ಕೆ ಮಾಡಿ ತುಳುವಿನಲ್ಲಿ ಪರೀಕ್ಷೆ ಬರೆದು ನೂರಕ್ಕೆ ನೂರು ಅಂಕಗಳನ್ನು ಪಡೆದಿರುವ ಜಿಲ್ಲೆಯ 17 ಮಂದಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ತುಳುಕೂಟದ ಗೌರವ ಸದಸ್ಯರಾಗಿರುವ ಪೂರ್ಣಿಮಾ ಜನಾರ್ಧನ್,ಹಾಗೂ ಯೋಗಸಾಧಕಿ ಕು.ತನುಶ್ರೀ ಪಿತ್ರೋಡಿ ಇವರನ್ನು ಅಭಿನಂದಿಸಲಾಗುವುದು.
ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ವಿ.ಜಿ.ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯ ಶಾಸಕರಾದ ರಘುಪತಿ ಭಟ್, ಉಡುಪಿಯ ಖ್ಯಾತ ಉದ್ಯಮಿಗಳಾದ ವಿಶ್ವನಾಥ್ ಶೆಣೈ, ಉಡುಪಿ ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ತುಳುಕೂಟದ ಸ್ಥಾಪಕಾಧ್ಯಕ್ಷರಾದ ಭಾಸ್ಕರಾನಂದ ಕುಮಾರ್ , ಗೌರವಾಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತುಳುಕೂಟ ಉಡುಪಿಯ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ಪ್ರಶಸ್ತಿಯ ಸಂಚಾಲಕಿಯಾಗಿರುವ ತಾರಾ ಉಮೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.