ಕಾಪು ಎಸ್.ಐ.ಓ: ಸ್ವಾತಂತ್ರ್ಯ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ
ಕಾಪು(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕೊಂಬಗುಡ್ಡೆ ತೌಹೀದ್ ಮಂಝಿಲ್ ಹೊರಾಂಗಣದಲ್ಲಿ ಎಸ್. ಐ. ಓ. ಕಾಪು ಘಟಕ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾಪು ಠಾಣೆಯ ಎಎಸ್ಐ ರಾಜೇಂದ್ರ ಮಣಿಯಾಣಿಯವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ನಾವೆಲ್ಲರೂ ಕೆಡುಕುಗಳಿಂದ ದೂರ ಇರುವಂತೆ ಜನರಿಗೆ ತಿಳಿ ಹೇಳಬೇಕು. ದುಶ್ಚಟವನ್ನು ಮೈಗೂಡಿಸಿ ದುಷ್ಕ್ರತ್ಯವನ್ನು ಮಾಡುವವರು ಇದ್ದರೆ ಪೊಲೀಸ್ ಇಲಾಖೆಗೆ ತಿಳಿಸಿಬೇಕೆಂದು ತಿಳಿಸಿದರು.
ಸಬಾಧ್ಯಕ್ಷತೆ ವಹಿಸಿ ಮಾತನಾಡಿದ, ಜಮಾ-ಅತೆ ಇಸ್ಲಾಮಿ ಹಿಂದ್ ನ ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿಯವರು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ನಾವು 75ನೇ ವರ್ಷದಲ್ಲಿ ಸಾಗುತ್ತಿದ್ದೇವೆ. ಈ ಸ್ವಾತಂತ್ರ್ಯ ದ ಹಿಂದೆ ಜಾತಿ-ಮತ ಬೇಧವಿಲ್ಲದ ನಮ್ಮ ಹಿರಿಯರ ಹೋರಾಟ ಮತ್ತು ಬಲಿದಾನಗಳಿವೆ.
ನಾವೂ ಕೂಡಾ ನಮ್ಮ ಹಿರಿಯರು ನಡೆದ ದಾರಿಯಂತೆ ಯಾವುದೇ ರೀತಿಯ ಜಾತಿ-ಮತ ಬೇಧವಿಲ್ಲದೆ, ಎಲ್ಲೂ ತಾರತಮ್ಯ ಮಾಡದೆ ಬಾಳಿ ಬದುಕಬೇಕು. ನಾವೆಲ್ಲರೂ ಪರಸ್ಪರ ಸಹೋದರರು, ಪರಸ್ಪರ ಪ್ರೀತಿ, ವಿಶ್ವಾಸ ಇಟ್ಟು ಯಾವುದೇ ಕ್ಷುದ್ರ ಶಕ್ತಿಗಳಿಂದ ದೇಶಕ್ಕೆ ಆತಂಕ ಎದುರಾದರೆ,ಅದನ್ನು ಒಗ್ಗಟ್ಟಾಗಿ ಹಿಮ್ಮೆಟ್ಟಿಸಲು ತಯಾರಿರಬೇಕು. ಇಂದಿನ ರಾಜಕೀಯದ ಯಾವುದೇ ಷಡ್ಯಂತ್ರಕ್ಕೇ ಬಲಿಯಾಗದೆ ನಮ್ಮಲ್ಲಿನ ವಿವಿಧತೆಯಲ್ಲಿರುವ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕಾಪು ಎಸ್. ಐ. ಓ ನ ಅಧ್ಯಕ್ಷರಾದ ಅನೀಸ್ ಅಲಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ, ಗ್ರಹರಕ್ಷಕ ದಳದ ಘಟಕಾಧಿಕಾರಿ ಲಕ್ಷ್ಮೀ ನಾರಾಯಣ ರಾವ್, ಆಶಾ ಕಾರ್ಯಕರ್ತೆಯರಾದ ಸೋಮವತಿ , ಸುಮನ ತುಕಾರಾಮ್, ಉಷಾ ಉಮೇಶ ಕರ್ಕೇರರವರನ್ನು ಕೊರೋನ ವಾರಿಯರ್ಸ್ ಗುರುತಿಸಿ ಸನ್ಮಾನಿಸಲಾಯಿತು.
10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್. ಐ. ಓ ನ ಕಾರ್ಯಕರ್ತರಾದ ಅಬ್ದುಲ್ ಖಾಲಿದ್ ಮತ್ತು ಮುಹಮ್ಮದ್ ಮಾಝ್ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಕಾಮತ್, ಬಾಬು ಶೆಟ್ಟಿಗಾರ್, ನಸೀರ್ ಅಹ್ಮದ್, ಎಸ್ಐಓ ಉಡುಪಿ ಯುನಿಟ್ ಅಧ್ಯಕ್ಷರಾದ ಯಾಸೀನ್ ಮನ್ನಾ, ಕಾಪು ಯುನಿಟ್ ಅಧ್ಯಕ್ಷರಾದ ಅನೀಸ್ ಅಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಇಬ್ರಾಹೀಮ್ ಸಯೀದ್ ಉಮ್ರಿ ಯವರು ನಿರೂಪಿಸಿದರು. ಅಬ್ದುಲ್ ಖಾಲಿದ್ ಧನ್ಯವಾದ ವಿತ್ತರು. ಕೊನೆಯಲ್ಲಿ ಮುಹಮ್ಮದ್ ಅಕ್ಬರ್, ಅಲ್ ಖಮಾ, ಮುಹಮ್ಮದ್ ಮುಯೀಸ್ ದೇಶ ಪ್ರೇಮ ಗೀತೆ ಹಾಡಿದರು.