ಉಡುಪಿ: ಪ್ರಸಿದ್ದ ಭಾಗವತ, ಪ್ರಸಂಗಕರ್ತ ಬೊಟ್ಟಿಗೆರೆ ಪುರುಷೋತ್ತಮ ಪೂಂಜ‌ ನಿಧನ

ಉಡುಪಿ (ಉಡುಪಿ ಟೈಮ್ಸ್ ವರದಿ):ಯಕ್ಷಗಾನ ಭಾಗವತ, ಪ್ರಸಂಗಕರ್ತ ಪುರುಷೋತ್ತಮ ಪೂಂಜ(68 ) ಅಸೌಖ್ಯದಿಂದ ಆಗಸ್ಟ್ 14 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.

ಬಿ.ಎಸ್ಸಿ ಪದವಿ ಮುಗಿಸಿ ಮುಂಬಯಿಯಲ್ಲಿ ಉದ್ಯೋಗಿಯಾಗಿ ಅಲ್ಲಿರುವಾಗಲೇ ವೇಷಗಳನ್ನು ಮಾಡುತ್ತಾ ಮುಂದೆ ಯಕ್ಷಗಾನದ ಮೇಲಿನ ಸೆಳೆತದಿಂದ ಊರಿಗೆ ಬಂದು‌ ಭಾಗವತರಾಗಿ ಪುತ್ತೂರು, ಕರ್ನಾಟಕ ಮೇಳಗಳಲ್ಲಿ‌ ಏಳು ವರ್ಷ ತಿರುಗಾಟ ಮಾಡಿ ಕಳೆದ ಮೂರು ದಶಕದಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು.

ತುಳು ಮತ್ತು ಕನ್ನಡದಲ್ಲಿ ಹತ್ತಾರು ಶ್ರೇಷ್ಠ ಪ್ರಸಂಗಗಳನ್ನು ರಚಿಸಿದ್ದಾರೆ. ಮಾನಿಷಾದವಂತೂ‌ ಆಟಕೂಟಳಲ್ಲಿ ಸಾವಿರಾರು ಪ್ರದರ್ಶನ ಕಂಡಿದೆ. ಯಕ್ಷಗಾನ ಗುರುಗಳಾಗಿ‌ ಅತ್ಯುತ್ತಮ ನಿರ್ದೇಶಕರಾಗಿ‌ ಮಾನಿತರಾಗಿದ್ದಾರೆ.‌ ಹಲವು ಪುರಸ್ಕಾರಗಳಿಗೆ ಭಾಜನರಾದ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಯಕ್ಷಗಾನ ವಿದ್ವಾಂಸರಿಗಾಗಿರುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!