ಉಡುಪಿ : ಬಂಟಕಲ್ಲು ಚೆಂಡೆ ಬಳಗದಿಂದ ಶ್ರಾವಣ ಸಂಭ್ರಮ
ಉಡುಪಿ (ಉಡುಪಿ ಟೈಮ್ಸ್ ವರದಿ) : ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ ಬಂಟಕಲ್ಲು,ಇದರ ವತಿಯಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮವು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿತು. ನಿವೃತ್ತ ಶಿಕ್ಷಕಿ ಗಿರಿಜಾ ನಾಯಕ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ಮಧುರಾ ನಾಯಕ್ ಅವರು ಮಾತನಾಡುತ್ತಾ ಹಿಂದೂ ಸಂಸ್ಕೃತಿಯಲ್ಲಿ ವರ್ಷದ ಪ್ರತೀ ಮಾಸವೂ ಮಹತ್ವವನ್ನು ಪಡೆದಿದ್ದು ಶ್ರಾವಣ ಮಾಸವಿಡೀ ಹಬ್ಬಗಳನ್ನು ಆಚರಿಸಲಾಗುತ್ತದೆ.ನಾಗಪಂಚಮಿಯಂತಹ ಹಬ್ಬಗಳಲ್ಲಿ ಒಂದು ರೀತಿಯಲ್ಲಿ ನಾವು ಪ್ರಕೃತಿ ಪೂಜೆ ಮಾಡುತ್ತೇವೆ.ನಾಗದೇವರಿಗೆ ಹಾಲು,ಎಳನೀರು,ತುಪ್ಪ, ಅರಿಶಿನ ಹಾಕುವುದರ ಮೂಲಕ ಭೂಮಿಯನ್ನು ಫಲವತ್ತಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ.ಹೀಗೆ ಹಬ್ಬಗಳಲ್ಲಿ ವೈಜ್ಞಾನಿಕ ವಿಚಾರಗಳೂ ಕಾಣಸಿಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಕೆ.ಆರ್.ಪಾಟ್ಕರ್, ಸಂಗೀತ ಹಾಗೂ ಚೆಂಡೆ ಕಲಾವಿದ ಪ್ರವೀಣ್ ನಾಯಕ್ ಬುಕ್ಕಿಗುಡ್ಡೆ,ಇತಿಹಾಸಕಾರ ಹಾಗೂ ಪುರಾತತ್ವ ತಜ್ಞ ಸುಭಾಷ್ ಹಾಗೂ ಉನ್ನತ ವ್ಯಾಸಂಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿರುವ ಜ್ಯೋತಿ ಬೋರ್ಕರ್ ಸಾಧನೆಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ಚೆಂಡೆ ಬಳಗದ ಸದಸ್ಯರಾದ ಆಶಾ ನಾಯಕ್, ಸಂಜನಾ ಪಾಟ್ಕರ್ ,ಶೈಲಜಾ ಪಾಟ್ಕರ್ ಮತ್ತು ಅಕ್ಷತಾ ಅವರು ಅಭಿನಂದನಾ ಪತ್ರಗಳನ್ನು ವಾಚಿಸಿದರು.ಆರ್ಥಿಕವಾಗಿ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ ವನ್ನು ಪ್ರಾಯೋಜಕರಿಂದ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನಗಳ ಪ್ರಾಯೋಜಕರನ್ನು ಗೌರವಿಸಲಾಯಿತು. ನೀಲವೇಣಿ ಅವರು ಬಳಗದ ವರದಿ ಯನ್ನು ವಾಚಿಸಿದರು..ಸಂಜನಾ ಮತ್ತು ಜ್ಯೋತಿ ಪ್ರಾರ್ಥನೆ ಗೈದರು. ಗೀತಾ ವಾಗ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸರ್ವರನ್ನೂ ಸ್ವಾಗತಿಸಿದರು. ಜ್ಯೋತಿ ರಾಜೇಂದ್ರ ನಾಯಕ್ ಧನ್ಯವಾದವಿತ್ತರು.ಶ್ರಾವಣ ಮಾಸದ ಸಲುವಾಗಿ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ಈ ಸಂದರ್ಭದಲ್ಲಿ ಉಣಬಡಿಸಲಾಯಿತು.